ಬೆಂಗಳೂರು: ನನ್ನನ್ನು ಕೊಲೆ ಮಾಡಲು ಬೆನ್ನಟ್ಟುತ್ತಿದ್ದಾರೆ, ಕಾಪಾಡಿ ಎಂದು ಅಂಗಡಿಯೊಳಗೆ ನುಗ್ಗಿದ ದುಷ್ಕರ್ಮಿಯೊಬ್ಬ ಯುವತಿಯ ಕೈಗಳಿಗೆ ಫೆವಿಕ್ವಿಕ್ ಹಾಕಿ ಅಂಟಿಸಿ, ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ದೋಚಿದ್ದಾನೆ. ಅಷ್ಟೇ ಅಲ್ಲ, ಸ್ಥಳೀಯರು ಆತನನ್ನು ಹಿಡಿಯಲು ಮುಂದಾದಾಗ ಯುವತಿಯ ಕುತ್ತಿಗೆಗೆ ಚಾಕು ಹಿಡಿದು ಕೊಲೆ ಬೆದರಿಕೆ ಹಾಕಿದ್ದಾನೆ. ಸಿನಿಮೀಯ ರೀತಿಯಲ್ಲಿ ನಡೆದ ಈ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ.

ಅಂಗಡಿಗೆ ನುಗ್ಗಿ ರಕ್ಷಣೆ ಕೇಳಿದ ಆರೋಪಿ!

ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 31ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಭುರಾಜ್ ಅಲಿಯಾಸ್ ರಾಜ್ ಬಂಧಿತ ಆರೋಪಿ. ಅಕ್ಟೋಬರ್ 31ರಂದು ಬೆಳಿಗ್ಗೆ ಸುಮಾರು 11:45ರ ವೇಳೆಗೆ ಇಂದಿರಾನಗರದ ಪ್ರೀಮಿಯಂ ಶೂ ಮತ್ತು ಬ್ಯಾಗ್ ರಿಪೇರಿ ಅಂಗಡಿಯಲ್ಲಿ ಜಯಶ್ರೀ ಎಂಬ ಯುವತಿ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಅಂಗಡಿಗೆ ನುಗ್ಗಿದ ಪ್ರಭುರಾಜ್, ‘ನನ್ನನ್ನು ಯಾರೋ ಕೊಲೆ ಮಾಡಲು ಬೆನ್ನಟ್ಟುತ್ತಿದ್ದಾರೆ, ದಯವಿಟ್ಟು ಕಾಪಾಡಿ’ ಎಂದು ಹೇಳಿದ್ದಾನೆ.

ಫೆವಿಕ್ವಿಕ್ ಹಾಕಿ ಕೈಗಳನ್ನು ಅಂಟಿಸಿ ಚಿನ್ನದ ಸರ ಕಳವು!

ಆರೋಪಿಯ ಮಾತು ನಂಬಿ ಯುವತಿ ಆತಂಕಗೊಂಡಿರುವಾಗಲೇ ಆತ ತನ್ನ ಅಸಲಿ ರೂಪ ತೋರಿಸಿದ್ದಾನೆ. ಯುವತಿಯ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿದ ಆತ, ಆಕೆಯ ಎರಡೂ ಕೈಗಳಿಗೆ ಫೆವಿಕ್ವಿಕ್ ಸುರಿದು ಅಂಗಡಿಯ ಮೇಜಿಗೆ ಅಂಟಿಸಿದ್ದಾನೆ. ಬಳಿಕ ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು 4.5 ಲಕ್ಷ ರೂಪಾಯಿ ಮೌಲ್ಯದ, 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಂಡಿದ್ದಾನೆ.

ಯುವತಿಯ ಕುತ್ತಿಗೆಗೆ ಚಾಕು ಹಿಡಿದು ಕೊಲೆ ಬೆದರಿಕೆ!

ಚಿನ್ನದ ಸರ ಕಸಿದುಕೊಳ್ಳುತ್ತಿದ್ದಂತೆ ಯುವತಿ ಜಯಶ್ರೀ ಜೋರಾಗಿ ಕೂಗಿಕೊಂಡಿದ್ದಾರೆ. ಇದರಿಂದ ಅಕ್ಕಪಕ್ಕದ ಅಂಗಡಿಯವರು ಹಾಗೂ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿದ್ದಾರೆ. ಜನರು ಅಂಗಡಿಯೊಳಗೆ ಬರುತ್ತಿದ್ದಂತೆ ಗಾಬರಿಗೊಂಡ ಆರೋಪಿ, ಯುವತಿಯ ಕುತ್ತಿಗೆಗೆ ಚಾಕು ಹಿಡಿದು, ‘ಯಾರಾದರೂ ಹತ್ತಿರ ಬಂದರೆ ಆಕೆಯನ್ನು ಕೊಲೆ ಮಾಡುತ್ತೇನೆ’ ಎಂದು ಬೆದರಿಸಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ.

ಸಮಯಪ್ರಜ್ಞೆ ಮೆರೆದ ಸಾರ್ವಜನಿಕರು; ಆರೋಪಿಯ ಬಂಧನ!

ಆದರೆ ಧೃತಿಗೆಡದ ಸ್ಥಳೀಯರು ಚಾಣಾಕ್ಷತನದಿಂದ ಆರೋಪಿಯ ಗಮನ ಬೇರೆಡೆ ಸೆಳೆದು ಆತನನ್ನು ಹಿಡಿದಿದ್ದಾರೆ. ಬಳಿಕ ಆತನನ್ನು ಇಂದಿರಾನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಭುರಾಜ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *