ಹೇಳಿಕೆ ಹಿಂಪಡೆದು ಬಹಿರಂಗ ಕ್ಷಮೆಯಾಚಿಸುವಂತೆ ಆಗ್ರಹ
ಮಡಿಕೇರಿ: ಕೊಡಗಿನ ಮಲಯಾಳಿ ಸಮುದಾಯದ ಕುರಿತು ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಕೊಡಗಿನ ವಿವಿಧ ಮಲಯಾಳಿ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಖಂಡನೆ ವ್ಯಕ್ತಪಡಿಸಿವೆ.
ಕ್ರೀಡಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರತಾಪ್ ಸಿಂಹ ಅವರು, ಕೊಡವ ಸಂಸ್ಕೃತಿಗೆ ಕೇರಳ ಮೂಲದ ಮಲಯಾಳಿ ಸಮುದಾಯದಿಂದ ಧಕ್ಕೆಯಾಗುತ್ತಿದೆ ಎಂಬ ಅರ್ಥ ಬರುವಂತೆ ಹೇಳಿಕೆ ನೀಡಿದ್ದಾರೆ. ಇದು ಕೊಡಗಿನ ಮಲಯಾಳಿ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಸಂಘಟನೆಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿವೆ.



ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಜಿಲ್ಲಾ ಸಮಿತಿ ಸೇರಿದಂತೆ ಜಿಲ್ಲೆಯ ವಿವಿಧ ಹಿಂದೂ ಮಲಯಾಳಿ ಸಂಘಟನೆಗಳು, ಕೊಡಗು ಜಿಲ್ಲಾ ಎಸ್ಎನ್ಡಿಪಿ, ವಿಶ್ವಕರ್ಮ ಸಂಘಟನೆ, ಕೆಎನ್ಎಸ್ ಹಾಗೂ ತಿಯನ್ ಮಹಾಸಭಾ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿವೆ.



ಕೊಡಗು ಮತ್ತು ಕೇರಳದ ನಡುವಿನ ಸಂಬಂಧ ತಲೆಮಾರುಗಳಿಂದ ಬೆಳೆದುಬಂದಿದ್ದು, ವ್ಯಾಪಾರ, ಹಬ್ಬಗಳು ಹಾಗೂ ಧಾರ್ಮಿಕ ಆಚರಣೆಗಳು ಈ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಕೊಡಗಿನ ಹಲವು ಕುಟುಂಬಗಳು ಮತ್ತು ದೇವಾಲಯಗಳ ಪೂಜಾ ಸಂಪ್ರದಾಯಗಳು ಕೇರಳದೊಂದಿಗೆ ನಂಟು ಹೊಂದಿವೆ. ಎರಡೂ ಪ್ರದೇಶಗಳ ಜನರು ಪರಸ್ಪರರ ಧಾರ್ಮಿಕ ನಂಬಿಕೆ ಹಾಗೂ ಸಾಂಸ್ಕೃತಿಕ ಆಚರಣೆಗಳಿಗೆ ಗೌರವ ನೀಡುತ್ತಾ ಬಂದಿದ್ದಾರೆ ಎಂದು ಸಂಘಟನೆಗಳು ತಿಳಿಸಿವೆ.



ಕೊಡಗಿನ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಮಲಯಾಳಿ ಸಮುದಾಯಕ್ಕೆ ಅಪಾರ ಗೌರವವಿದೆ. ಕೊಡವ ಸಮುದಾಯ ಸೇರಿದಂತೆ ಜಿಲ್ಲೆಯ ಇತರ ಸಮುದಾಯಗಳೊಂದಿಗೆ ಮಲಯಾಳಿ ಕುಟುಂಬಗಳು ತಲೆಮಾರುಗಳಿಂದ ಅನ್ಯೋನ್ಯವಾಗಿ ಬದುಕುತ್ತಿವೆ. ನಮ್ಮ ಸಮುದಾಯದ ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ಯಾವುದೇ ರಾಜಕೀಯ ನಾಯಕರಿಂದ ಪ್ರಮಾಣಪತ್ರದ ಅಗತ್ಯವಿಲ್ಲ. ಕೊಡಗಿನ ಜನರೊಂದಿಗೆ ಬೆಳೆಸಿಕೊಂಡಿರುವ ಪರಸ್ಪರ ವಿಶ್ವಾಸ ಮತ್ತು ಗೌರವವೇ ನಮ್ಮ ಸಹಬಾಳ್ವೆಗೆ ಸಾಕ್ಷಿ ಎಂದು ಪ್ರಕಟಣೆ ಹೇಳಿದೆ.



ಒಂದು ಸಮೀಕ್ಷೆಯ ಅಂದಾಜಿನ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಸುಮಾರು 45 ಸಾವಿರ ಮಲಯಾಳಿಗಳು ವಾಸಿಸುತ್ತಿದ್ದು, ಕೃಷಿ, ವ್ಯಾಪಾರ, ಶಿಕ್ಷಣ ಮತ್ತು ಸೇವಾ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡುತ್ತಿದ್ದಾರೆ. ದೇಶದ ಅಭಿವೃದ್ಧಿಯಲ್ಲಿಯೂ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಉದ್ಯಮ, ಕ್ರೀಡೆ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ಮಲಯಾಳಿ ಸಮುದಾಯದವರ ಪಾತ್ರ ಮಹತ್ವದ್ದಾಗಿದೆ ಎಂದು ಸಂಘಟನೆಗಳು ಉಲ್ಲೇಖಿಸಿವೆ.
ವೈವಿಧ್ಯತೆಯಲ್ಲಿ ಏಕತೆಯೇ ಭಾರತದ ಶಕ್ತಿ. ತಮ್ಮ ಸಂಸ್ಕೃತಿಯನ್ನು ಆಚರಿಸುವುದರ ಜೊತೆಗೆ ಇತರರ ಸಂಸ್ಕೃತಿಯನ್ನೂ ಗೌರವಿಸುವುದು ಸಹಬಾಳ್ವೆಯ ಮೂಲಾಧಾರ. ಸಾರ್ವಜನಿಕ ಜೀವನದಲ್ಲಿ ಗೌರವಾನ್ವಿತ ಸ್ಥಾನ ಹೊಂದಿರುವವರು ಯಾವುದೇ ಜಾತಿ, ಸಮುದಾಯ ಅಥವಾ ಧರ್ಮದವರ ಭಾವನೆಗಳಿಗೆ ಧಕ್ಕೆಯಾಗದಂತೆ ಜವಾಬ್ದಾರಿಯಿಂದ ಮಾತನಾಡಬೇಕು. ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವುದೇ ನಾಯಕತ್ವದ ಮೂಲ ಗುಣ. ಒಂದು ಸಮುದಾಯದ ಮೇಲೆ ಸಾಮೂಹಿಕವಾಗಿ ಹೊಣೆ ಹೊರಿಸುವ ಹೇಳಿಕೆಗಳು ನಾಯಕತ್ವದ ಜವಾಬ್ದಾರಿಗೆ ತಕ್ಕುದಲ್ಲ ಎಂದು ಸಂಘಟನೆಗಳು ಅಭಿಪ್ರಾಯಪಟ್ಟಿವೆ.



ಕೊಡಗಿನ ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರ ಮತ್ತು ಇತಿಹಾಸಕ್ಕೆ ಮಲಯಾಳಿ ಸಮುದಾಯವೂ ಗೌರವ ನೀಡುತ್ತದೆ. ನಮಗೆ ಬೇಕಾಗಿರುವುದು ಸಂಘರ್ಷವಲ್ಲ, ಗೌರವ; ದ್ವೇಷವಲ್ಲ, ಸಹಬಾಳ್ವೆ. ಆದರೆ ಸಮುದಾಯದ ಆತ್ಮಗೌರವದ ವಿಚಾರದಲ್ಲಿ ಎಂದಿಗೂ ಮೌನವಾಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.
ಕೊಡಗಿನ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ ಅವರ ಬಳಿ ನಿರ್ದಿಷ್ಟ ಸಾಕ್ಷ್ಯಗಳಿದ್ದರೆ ಅವುಗಳನ್ನು ಸಾರ್ವಜನಿಕರ ಮುಂದಿಡಲಿ. ಯಾರಾದರೂ ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ ಇಡೀ ಮಲಯಾಳಿ ಸಮುದಾಯವನ್ನೇ ಅಪರಾಧಿಗಳಂತೆ ಬಿಂಬಿಸುವುದು ಸರಿಯಲ್ಲ. ಕೊಡಗಿನ ಸಂಸ್ಕೃತಿಯ ಸಂರಕ್ಷಣೆಗೆ ಸಂಬಂಧಿಸಿದ ಯಾವುದೇ ವಿಚಾರವನ್ನು ಪರಸ್ಪರ ಗೌರವದಿಂದ ಚರ್ಚಿಸಲು ಸಿದ್ಧರಿದ್ದೇವೆ ಎಂದು ಸಂಘಟನೆಗಳು ಸ್ಪಷ್ಟಪಡಿಸಿವೆ.
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮಲಯಾಳಿ ಸಮುದಾಯದ ಕುರಿತು ಸಾರ್ವಜನಿಕ ಸಮಾರಂಭದಲ್ಲಿ ನೀಡಿರುವ ನಿಂದನಾರ್ಹ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು. ಅಲ್ಲದೆ, ಹೇಳಿಕೆಯಿಂದ ಸಮುದಾಯಕ್ಕೆ ಉಂಟಾದ ನೋವಿಗೆ ಪತ್ರಿಕಾಗೋಷ್ಠಿ ಮೂಲಕ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.
ತಪ್ಪಿದಲ್ಲಿ ಮುಂದಿನ ಪರಿಣಾಮಗಳಿಗೆ ಪ್ರತಾಪ್ ಸಿಂಹ ಅವರೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿರುವ ಸಂಘಟನೆಗಳು, ಕೊಡಗಿನ ಪರಂಪರೆಯನ್ನು ಗೌರವಿಸುತ್ತಾ ಜಿಲ್ಲೆಯ ಎಲ್ಲ ಸಮುದಾಯಗಳೊಂದಿಗೆ ಸೌಹಾರ್ದದಿಂದ ಬದುಕುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿವೆ.




