ಡಿಪ್ಲೊಮಾ ಇಂಜಿನಿಯರಿಂಗ್ ಉದ್ಯೋಗ ತೊರೆದು ತಂದೆಯ ಕಸುಬು ಮುಂದುವರಿಸಿದ ಯುವಕ
ಉದ್ಯೋಗದ ಹಿಂದೆ ಓಡುವ ಯುವ ಸಮೂಹಕ್ಕೆ ಮಾದರಿಯಾದ ಸೀಮಂತ್
✍️ ಹಸೈನಾರ್ ಜಯನಗರ


ಕುಶಾಲನಗರ: ಇಂದಿನ ಯುವಜನತೆ ಉನ್ನತ ಶಿಕ್ಷಣ ಪಡೆದು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಕನಸು ಕಾಣುತ್ತಿರುವ ಸಂದರ್ಭದಲ್ಲಿ, ಆಟೋಮೊಬೈಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿ ಪ್ರತಿಷ್ಠಿತ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ 22 ವರ್ಷದ ಯುವಕನೊಬ್ಬ ತನ್ನ ಉದ್ಯೋಗಕ್ಕೆ ವಿದಾಯ ಹೇಳಿ ತಂದೆಯ ಐದು ದಶಕಗಳ ವೃತ್ತಿಯನ್ನು ಮುಂದುವರಿಸಲು ಮುಂದಾಗಿರುವುದು ಗಮನ ಸೆಳೆದಿದೆ.



ಕುಶಾಲನಗರದ ಜಯರಾಜ್ ಆಚಾರ್ಯ ಮತ್ತು ಸರೋಜ ದಂಪತಿಯ ಪುತ್ರ ಸೀಮಂತ್ ಈ ಯುವಕ. ಕುಶಾಲನಗರದ ಬಿ.ಎಂ. ರಸ್ತೆಯ ಎಕ್ಸಿಸ್ ಬ್ಯಾಂಕ್ ಸಮೀಪ, ಸಂತೆ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿರುವ ‘ಕೆ.ಆರ್. ಟೈಮಿಂಗ್ಸ್’ ವಾಚ್ ರಿಪೇರಿ ಅಂಗಡಿಯನ್ನು ಇದೀಗ ಸೀಮಂತ್ ಮುನ್ನಡೆಸುತ್ತಿದ್ದಾನೆ.



ಸುಮಾರು 50 ವರ್ಷಗಳಿಂದ ವಾಚ್ ರಿಪೇರಿ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ತಂದೆ ಜಯರಾಜ್ ಆಚಾರ್ಯ ಅವರ ವೃತ್ತಿಗೆ ಆಸರೆಯಾಗಬೇಕೆಂಬ ಉದ್ದೇಶದಿಂದ ಸೀಮಂತ್ ಈ ನಿರ್ಧಾರ ಕೈಗೊಂಡಿದ್ದಾನೆ. ಕಳೆದ ಆರು ತಿಂಗಳಿನಿಂದ ತಂದೆ ಅನಾರೋಗ್ಯದ ಕಾರಣ ಮನೆಯಲ್ಲಿರುವುದರಿಂದ, ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ವೃತ್ತಿ ನಿಂತುಹೋಗಬಾರದು ಎಂಬ ದೃಢ ಸಂಕಲ್ಪದೊಂದಿಗೆ ಅಂಗಡಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾನೆ.



ಸಾಮಾನ್ಯವಾಗಿ ಉತ್ತಮ ಉದ್ಯೋಗ ಮತ್ತು ಹೆಚ್ಚಿನ ವೇತನದ ನಿರೀಕ್ಷೆಯಲ್ಲಿ ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ತೆರಳುವ ಯುವಕರ ನಡುವೆ, ಸೀಮಂತ್ ತನ್ನ ತಂದೆಯ ವೃತ್ತಿಯನ್ನೇ ಜೀವನದ ಮಾರ್ಗವನ್ನಾಗಿ ಆಯ್ಕೆ ಮಾಡಿಕೊಂಡಿರುವುದು ವಿಶೇಷವಾಗಿದೆ. ತಂದೆಯ ಮಾರ್ಗದರ್ಶನದಲ್ಲಿ ಬಾಲ್ಯದಿಂದಲೇ ವಾಚ್ ರಿಪೇರಿ ಕಲೆಯನ್ನು ಕಲಿತಿರುವ ಈತ, ಇದೀಗ ಅದೇ ವೃತ್ತಿಯಲ್ಲಿ ತೊಡಗಿಸಿಕೊಂಡು ಸಂತೃಪ್ತ ಜೀವನ ನಡೆಸುತ್ತಿದ್ದಾನೆ.



ಜಯರಾಜ್ ಆಚಾರ್ಯ ಅವರು ಕಳೆದ ಐದು ದಶಕಗಳಿಂದ ಗಡಿಯಾರಗಳ ದುರಸ್ತಿ ಕಾರ್ಯದಲ್ಲಿ ಅನುಭವ ಹೊಂದಿದ್ದಾರೆ. ಬಂಟ್ವಾಳ, ಸಕಲೇಶಪುರ, ಮಡಿಕೇರಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವೃತ್ತಿ ನಿರ್ವಹಿಸಿರುವ ಇವರು, ಕಳೆದ 12 ವರ್ಷಗಳಿಂದ ಕುಶಾಲನಗರದಲ್ಲಿ ‘ಕೆ.ಆರ್. ಟೈಮಿಂಗ್ಸ್’ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ.


ಗಡಿಯಾರಗಳ ದುರಸ್ತಿ ಎನ್ನುವುದು ಕೇವಲ ಉದ್ಯೋಗವಲ್ಲ; ಅದಕ್ಕೆ ಅಪಾರ ತಾಳ್ಮೆ, ಸೂಕ್ಷ್ಮ ದೃಷ್ಟಿ ಮತ್ತು ಯಾಂತ್ರಿಕ ಜ್ಞಾನದ ಅಗತ್ಯವಿದೆ. ಇಂದಿನ ಕ್ವಾರ್ಟ್ಜ್ ಹಾಗೂ ಸ್ಮಾರ್ಟ್ ವಾಚ್‌ಗಳ ಯುಗದಲ್ಲಿ ಸಾಂಪ್ರದಾಯಿಕ ಯಾಂತ್ರಿಕ ಗಡಿಯಾರಗಳ ದುರಸ್ತಿ ಮಾಡುವ ಕೌಶಲ್ಯ ಹೊಂದಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ತಂದೆಯಿಂದ ಕಲಿತ ವೃತ್ತಿಯನ್ನು ಮುಂದುವರಿಸುವ ಮೂಲಕ ಸೀಮಂತ್ ಅಪರೂಪದ ಕಲೆಯ ಉಳಿವಿಗೆ ಕೈಜೋಡಿಸಿದ್ದಾನೆ.


ಸೀಮಂತ್ ಅವರ ಕಿರಿಯ ಸಹೋದರ ಮೌನೇಶ್ ಅವರು ಭಾರತೀಯ ಸೇನೆಯ ಇ.ಎಂ.ಇ. ವಿಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಒಟ್ಟಿನಲ್ಲಿ, ಉನ್ನತ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳಿದ್ದರೂ ತಂದೆಯ ವೃತ್ತಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹೊತ್ತು ಮುನ್ನಡೆಯುತ್ತಿರುವ ಸೀಮಂತ್ ಇಂದಿನ ಯುವಜನತೆಗೆ ಉತ್ತಮ ಸಂದೇಶ ನೀಡಿದ್ದಾನೆ. ಈತನ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ‘ಕೆ.ಆರ್. ಟೈಮಿಂಗ್ಸ್’ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಿ, ಮುಂದಿನ ದಿನಗಳಲ್ಲಿ ಹಲವರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯಲಿ ಎಂಬುದು ‘ಕೂರ್ಗ್ ಮಿರರ್ ನ್ಯೂಸ್’ನ ಆಶಯವಾಗಿದೆ.




