ನಾಡು-ನುಡಿ ಹಾಗೂ ಸಮಾಜ ಸೇವೆ ಗುರುತಿಸಿ ಗೌರವ

ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕಾರ

ಸೋಮವಾರಪೇಟೆ: ನಾಡು-ನುಡಿ, ಕನ್ನಡ ಭಾಷೆಯ ಸೇವೆ ಹಾಗೂ ನಿಸ್ವಾರ್ಥ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಹಾಗೂ ಸಮಾಜ ಸೇವಕ ಫ್ರಾನ್ಸಿಸ್ ಡಿಸೋಜ ಅವರಿಗೆ ಪ್ರತಿಷ್ಠಿತ ‘ಗೋವರ್ಧನ ಗೋಪಾಲ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-2026’ ನೀಡಿ ಗೌರವಿಸಲಾಗಿದೆ.

ಮೈಸೂರಿನ ಯುವಂ ಯುಗಂ ಮಾಸಪತ್ರಿಕೆಯ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ, ಶಾನ್ ಗ್ಲೋಬಲ್ ಹ್ಯೂಮಾನಿಟಿ ಟ್ರಸ್ಟ್, ಬೋಗಾದಿ, ಮೈಸೂರು ಕಾವೇರಿ ನ್ಯೂಸ್ ಕನ್ನಡ ಹಾಗೂ ಶ್ರೀಗರಿ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ನವೆಂಬರ್ 25ರಂದು ಮೈಸೂರಿನ ಕರ್ನಾಟಕ ಕಲಾಮಂದಿರದ ಸಮೀಪವಿರುವ ಕಿರು ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಈ ಸಮಾರಂಭದಲ್ಲಿ ಯುವಂ ಯುಗಂ ಮಾಸಪತ್ರಿಕೆಯ ಮಾಲೀಕರು ಹಾಗೂ ಸಂಪಾದಕರಾದ ಗ್ರಹೇಶ್ವರ್ ಗಾರುಡಿಗೇಂದ್ರಮ್, ಉಪಸಂಪಾದಕ ಸಂದೇಶ್ ಜೋಸೆಫ್ ಡಿಸೋಜ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷರು ಮತ್ತು ನಾಡಿನ ಸುಪ್ರಸಿದ್ಧ ಕವಿಗಳಾದ ಡಾ. ಜಯಪ್ಪ ಹೊನ್ನಾಳಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಕನ್ನಡ ಭಾಷೆ, ನಾಡು-ನುಡಿಯ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಫ್ರಾನ್ಸಿಸ್ ಡಿಸೋಜ ಅವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಫ್ರಾನ್ಸಿಸ್ ಡಿಸೋಜ ಅವರು, “ನನ್ನ ಕನ್ನಡ ಸೇವೆ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಿರುವ ಯುವಂ ಯುಗಂ ಪತ್ರಿಕೆಯ ಬಳಗ ಹಾಗೂ ಕಾರ್ಯಕ್ರಮದ ಎಲ್ಲಾ ಆಯೋಜಕರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಗೌರವ ನನ್ನ ಮುಂದಿನ ಸಮಾಜ ಸೇವಾ ಕಾರ್ಯಗಳಿಗೆ ಮತ್ತಷ್ಟು ಪ್ರೇರಣೆ ನೀಡಿದೆ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *