ಬೆಂಗಳೂರು: ಸರ್ಕಾರಿ ಕನ್ನಡ ಶಾಲೆಗಳ ಉಳಿವು ಮತ್ತು ಬಲವರ್ಧನೆಗಾಗಿ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ದ ಕನ್ನಡ ಯಾತ್ರೆ 65ನೇ ದಿನಕ್ಕೆ ಕಾಲಿಟ್ಟಿದೆ. ಅಭಿಯಾನದ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಸಾಗುತ್ತಿರುವ ಈ ಯಾತ್ರೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುತ್ತಿದೆ.

ಕಳೆದ ಒಂದು ದಶಕದಿಂದ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಭಿಯಾನ ನಿರಂತರವಾಗಿ ಶ್ರಮಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಭೀತಿ ಎದುರಾದ ಹಿನ್ನೆಲೆಯಲ್ಲಿ ಅಭಿಯಾನವು ಹೋರಾಟದ ಹಾದಿಯನ್ನೂ ಹಿಡಿದಿದೆ. ಪೋಷಕರು, ಶಿಕ್ಷಕರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸರ್ಕಾರದ ಗಮನ ಸೆಳೆಯಲು ರಾಜ್ಯಾದ್ಯಂತ ಕನ್ನಡ ಯಾತ್ರೆ ನಡೆಸುತ್ತಿದೆ.

ಸರ್ಕಾರದ ಆದೇಶಗಳತ್ತ ಅಭಿಯಾನದ ಗಮನ

ಸರ್ಕಾರಿ ಶಾಲೆಗಳ ಉಳಿವಿಗಾಗಿ ಅಭಿಯಾನ ನಡೆಸಿದ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಹಲವು ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಮಹತ್ವದ ಆದೇಶಗಳು ಹೊರಬಿದ್ದಿವೆ ಎಂದು ಅಭಿಯಾನ ತಿಳಿಸಿದೆ.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಕ್ರಮ: ಸರ್ಕಾರಿ ಶಾಲೆಗಳಲ್ಲಿಯೇ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸುವಂತೆ ಸರ್ಕಾರ ಸೂಚನೆ ನೀಡಿದೆ. ಮಕ್ಕಳಿಗೆ ಬಾಲ್ಯದಿಂದಲೇ ಕನ್ನಡದ ವಾತಾವರಣದಲ್ಲಿ ಶಿಕ್ಷಣ ದೊರೆಯುವುದರ ಜೊತೆಗೆ ಇಂಗ್ಲಿಷ್ ಭಾಷೆಯ ಕಲಿಕೆಗೂ ಅವಕಾಶ ಸಿಗಬೇಕು ಎಂಬುದು ಅಭಿಯಾನದ ಆಶಯವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮೂಲಕ ಕನ್ನಡ ಶಾಲೆಗಳ ಉಳಿವಿಗೆ ಸಹಕಾರಿಯಾಗಬೇಕು ಎಂಬ ಉದ್ದೇಶದಿಂದ ಈ ಬೇಡಿಕೆಯನ್ನು ಮುಂದಿಡಲಾಗಿದೆ.

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬಸ್ ವ್ಯವಸ್ಥೆ: ದೂರದ ಊರುಗಳಿಂದ ಶಾಲೆಗೆ ಬರುವ ಮಕ್ಕಳ ಅನುಕೂಲಕ್ಕಾಗಿ ಹಾಗೂ ಸಾರಿಗೆ ಸಮಸ್ಯೆಯಿಂದ ಶಾಲೆ ತೊರೆಯುವ ಪರಿಸ್ಥಿತಿಯನ್ನು ತಪ್ಪಿಸಲು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸುವ ಕುರಿತು ಸರ್ಕಾರ ಆದೇಶ ಹೊರಡಿಸಿದೆ ಎಂದು ಅಭಿಯಾನ ತಿಳಿಸಿದೆ.

ಶಾಲಾ ಸಮವಸ್ತ್ರ ಬದಲಾವಣೆ: ಸರ್ಕಾರಿ ಶಾಲಾ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಹಾಗೂ ಶಾಲೆಗಳಿಗೆ ಹೊಸ ರೂಪ ನೀಡುವ ಉದ್ದೇಶದಿಂದ ಸಮವಸ್ತ್ರ ಬದಲಾವಣೆಗೆ ಸಂಬಂಧಿಸಿದ ಆದೇಶವನ್ನೂ ಸರ್ಕಾರ ಹೊರಡಿಸಿದೆ ಎಂದು ಅಭಿಯಾನ ಹೇಳಿದೆ.

ಮುಂದಿನ ಗುರಿ: ಪ್ರತಿ ತರಗತಿಗೆ ಒಬ್ಬ ಶಿಕ್ಷಕ

ಸರ್ಕಾರಿ ಶಾಲೆಗಳ ಉಳಿವು ಮಾತ್ರವಲ್ಲದೆ ಅವುಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವುದೂ ಅಭಿಯಾನದ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ತರಗತಿಗೂ ಪ್ರತ್ಯೇಕ ಶಿಕ್ಷಕರನ್ನು ನೇಮಿಸಬೇಕೆಂಬ ಬೇಡಿಕೆಯನ್ನು ಅಭಿಯಾನ ಮುಂದಿಟ್ಟಿದೆ.

ಕಳೆದ ಹತ್ತು ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಹಲವು ಬೇಡಿಕೆಗಳು ಈಡೇರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ ಸರ್ಕಾರಿ ಶಾಲೆಗಳ ನೈಜ ಬಲವರ್ಧನೆಗೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯ. ಆದ್ದರಿಂದ ಪ್ರತಿಯೊಂದು ತರಗತಿಗೂ ಶಿಕ್ಷಕರ ನೇಮಕಾತಿ ನಡೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂಬ ದೃಢ ನಿಲುವನ್ನು ಅಭಿಯಾನ ವ್ಯಕ್ತಪಡಿಸಿದೆ.

ಸರ್ಕಾರ ಹೊರಡಿಸಿರುವ ಆದೇಶಗಳು ಸಮರ್ಪಕವಾಗಿ ಅನುಷ್ಠಾನಗೊಂಡು, ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯಗಳ ಜೊತೆಗೆ ಪ್ರತಿ ತರಗತಿಗೂ ಶಿಕ್ಷಕರ ನೇಮಕವಾದಾಗ ಮಾತ್ರ ಕನ್ನಡ ಶಾಲೆಗಳ ಭವಿಷ್ಯ ಸುಭದ್ರವಾಗಲಿದೆ ಎಂಬ ಆಶಯದೊಂದಿಗೆ ಕನ್ನಡ ಯಾತ್ರೆ ಮುಂದುವರಿಯುತ್ತಿದೆ.

Leave a Reply

Your email address will not be published. Required fields are marked *