ರಾಜ್ಯ ಸರ್ಕಾರದ ಮೇಲ್ಮನವಿ ವಜಾ – ಓಲಾ, ಉಬರ್, ರ್ಯಾಪಿಡೊ ಸೇವೆಗೆ ಮುಂದುವರಿಕೆ ಅವಕಾಶ
ನವದೆಹಲಿ: ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸಲು ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿದ್ದ ಕರ್ನಾಟಕ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದರಿಂದ ಓಲಾ, ಉಬರ್, ರ್ಯಾಪಿಡೊ ಸೇರಿದಂತೆ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ಗಳು ಹಾಗೂ ಈ ಸೇವೆಯನ್ನು ಅವಲಂಬಿಸಿರುವ ಪ್ರಯಾಣಿಕರಿಗೆ ನಿರಾಳತೆ ಸಿಕ್ಕಂತಾಗಿದೆ.
ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ.


ಕೈಗೆಟುಕುವ ದರದ ಸಾರಿಗೆ ವ್ಯವಸ್ಥೆಗೆ ಒತ್ತು
ವಿಚಾರಣೆ ವೇಳೆ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರು ಬೈಕ್ ಟ್ಯಾಕ್ಸಿಗಳ ಕೈಗೆಟುಕುವ ದರದ ಕುರಿತು ಪ್ರಸ್ತಾಪಿಸಿದರು. ತಮ್ಮ ಕಚೇರಿಯಲ್ಲಿ ಕೆಲಸ ಮಾಡುವ ಯುವತಿಯರು ಬೈಕ್ ಟ್ಯಾಕ್ಸಿ ಬಳಸುತ್ತಿರುವುದನ್ನು ಉಲ್ಲೇಖಿಸಿದ ಅವರು, ಕಚೇರಿಗೆ ಹೇಗೆ ಬರುತ್ತೀರಿ ಎಂದು ಪ್ರಶ್ನಿಸಿದಾಗ, ಕ್ಯಾಬ್ನಲ್ಲಿ ಬರಲು ಹೆಚ್ಚಿನ ಹಣ ಖರ್ಚಾಗುವುದರಿಂದ ಬೈಕ್ ಟ್ಯಾಕ್ಸಿ ಬಳಸುವುದಾಗಿ ಯುವತಿಯರು ತಿಳಿಸಿದ್ದರು ಎಂದರು.
ಆಟೋದಲ್ಲಿ ಏಕೆ ಬರುವುದಿಲ್ಲ ಎಂಬ ಪ್ರಶ್ನೆಗೆ, ಆಟೋ ದರ ಬೈಕ್ ಟ್ಯಾಕ್ಸಿಗಿಂತ ಐದು ಪಟ್ಟು ಹೆಚ್ಚಿರುತ್ತದೆ ಎಂದು ಅವರು ಉತ್ತರಿಸಿದ್ದರು. ಈ ಮೂಲಕ ಸಾಮಾನ್ಯ ಜನರಿಗೆ ಬೈಕ್ ಟ್ಯಾಕ್ಸಿಗಳು ಕೈಗೆಟುಕುವ ಸಾರಿಗೆ ವ್ಯವಸ್ಥೆಯಾಗಿ ನೆರವಾಗುತ್ತಿರುವುದನ್ನು ನ್ಯಾಯಮೂರ್ತಿ ಗಮನಕ್ಕೆ ತಂದರು.


ಏನಿದು ಪ್ರಕರಣ?
ಕರ್ನಾಟಕದಲ್ಲಿ ಸೂಕ್ತ ನಿಯಮಾವಳಿ ರೂಪಿಸುವವರೆಗೆ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಈ ಹಿಂದೆ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಓಲಾ, ಉಬರ್, ರ್ಯಾಪಿಡೊ, ಬೈಕ್ ಮಾಲೀಕರು ಹಾಗೂ ಬೈಕ್ ಟ್ಯಾಕ್ಸಿ ಕಲ್ಯಾಣ ಸಂಘ ಮೇಲ್ಮನವಿ ಸಲ್ಲಿಸಿದ್ದವು.
2026ರ ಜನವರಿ 23ರಂದು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠವು ಬೈಕ್ ಟ್ಯಾಕ್ಸಿಗಳ ಮೇಲಿನ ನಿಷೇಧವನ್ನು ತೆರವುಗೊಳಿಸಿತ್ತು.
ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಿ ಕಾಂಟ್ರಾಕ್ಟ್ ಕ್ಯಾರೇಜ್ಗಳಾಗಿ ಬಳಸಲು ಅವಕಾಶವಿದೆ. ಸರ್ಕಾರ ನಿಯಂತ್ರಣಾ ಷರತ್ತುಗಳನ್ನು ವಿಧಿಸಬಹುದೇ ಹೊರತು, ಕೇವಲ ದ್ವಿಚಕ್ರ ವಾಹನ ಎಂಬ ಕಾರಣಕ್ಕೆ ಪರವಾನಗಿ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು.


ಸರ್ಕಾರದ ವಾದವೇನಿತ್ತು?
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ರಾಜ್ಯ ಸರ್ಕಾರ, ಪ್ರಯಾಣಿಕರ ಸುರಕ್ಷತೆ, ವಿಮಾ ಸೌಲಭ್ಯದ ಕೊರತೆ ಹಾಗೂ 2019ರ ತಜ್ಞರ ಸಮಿತಿಯ ವರದಿಯನ್ನು ಮುಂದಿಟ್ಟುಕೊಂಡು ವಾದ ಮಂಡಿಸಿತ್ತು.
ಬೆಂಗಳೂರಿನ ಸಂಚಾರ ದಟ್ಟಣೆಯ ಹಿನ್ನೆಲೆಯಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂಬುದು ಸರ್ಕಾರದ ಪ್ರಮುಖ ವಾದವಾಗಿತ್ತು. ಇದೇ ವೇಳೆ ಐದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳೂ ಸರ್ಕಾರದ ಪರವಾಗಿ ಮೇಲ್ಮನವಿ ಸಲ್ಲಿಸಿದ್ದವು.


ರಸ್ತೆಯಲ್ಲಿ ಬೈಕ್ಗಳಿಗೆ ಕಡಿಮೆ ಜಾಗ
ವಿಚಾರಣೆ ಸಂದರ್ಭದಲ್ಲಿ ಕಾರುಗಳಿಗೆ ಹೋಲಿಸಿದರೆ ಬೈಕ್ಗಳು ರಸ್ತೆಯಲ್ಲಿ ಕಡಿಮೆ ಜಾಗವನ್ನು ಆಕ್ರಮಿಸಿಕೊಳ್ಳುತ್ತವೆ ಎಂಬ ಅಂಶವನ್ನೂ ಸುಪ್ರೀಂ ಕೋರ್ಟ್ ಗಮನಿಸಿತ್ತು.
ರಾಜ್ಯದಲ್ಲಿ ಸುಮಾರು 4.5 ಲಕ್ಷ ಪ್ರಯಾಣಿಕರು ಬೈಕ್ ಟ್ಯಾಕ್ಸಿ ಸೇವೆ ಬಳಸುತ್ತಿದ್ದಾರೆ ಎಂದು ಅಗ್ರಿಗೇಟರ್ಗಳ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದ್ದರು. 2004 ಮತ್ತು 2024ರ ಕೇಂದ್ರ ಸರ್ಕಾರದ ಅಧಿಸೂಚನೆಗಳ ಪ್ರಕಾರ ದ್ವಿಚಕ್ರ ವಾಹನಗಳನ್ನು ಟ್ಯಾಕ್ಸಿಗಳಾಗಿ ಬಳಸಲು ಅವಕಾಶವಿದೆ ಎಂದು ಕೇಂದ್ರ ಸರ್ಕಾರವೂ ನ್ಯಾಯಾಲಯಕ್ಕೆ ತಿಳಿಸಿತ್ತು.
ಎರಡೂ ಕಡೆಯ ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಇದೀಗ ರಾಜ್ಯ ಸರ್ಕಾರ ಹಾಗೂ ಆಟೋ ಸಂಘಟನೆಗಳ ಮೇಲ್ಮನವಿಗಳನ್ನು ವಜಾಗೊಳಿಸಿದೆ. ಈ ಆದೇಶದಿಂದ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸಲು ಕಾನೂನುಬದ್ಧ ಅವಕಾಶ ಮತ್ತಷ್ಟು ಸ್ಪಷ್ಟವಾದಂತಾಗಿದೆ.
