2027ರ ಜನವರಿ 1 ಅರ್ಹತಾ ದಿನಾಂಕ | ಹೆಸರು ಸೇರ್ಪಡೆಗೆ ಫಾರ್ಮ್-6, ತಿದ್ದುಪಡಿಗೆ ಫಾರ್ಮ್-8 ಬಳಕೆ
ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವೇಳೆ 1.08 ಕೋಟಿ ಮತದಾರರ ಹೆಸರುಗಳು ಕೈಬಿಟ್ಟುಹೋಗಿವೆ ಎಂಬ ಆರೋಪದ ಬೆನ್ನಲ್ಲೇ, ಭಾರತ ಚುನಾವಣಾ ಆಯೋಗವು ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಾರಾಂಶ ಪರಿಷ್ಕರಣೆಗೆ ವೇಳಾಪಟ್ಟಿ ಪ್ರಕಟಿಸಿದೆ. 2027ರ ಜನವರಿ 1 ಅನ್ನು ಅರ್ಹತಾ ದಿನಾಂಕವನ್ನಾಗಿ ನಿಗದಿಪಡಿಸಲಾಗಿದೆ.


ಅರ್ಹ ಮತದಾರರು, ಯುವಜನರು ಹಾಗೂ ಮೊದಲ ಬಾರಿಗೆ ಮತದಾನದ ಹಕ್ಕು ಪಡೆಯುವವರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಲು ಈ ಪರಿಷ್ಕರಣೆ ಅವಕಾಶ ಕಲ್ಪಿಸಲಿದೆ. ಹೊಸದಾಗಿ ಹೆಸರು ನೋಂದಾಯಿಸಲು ಫಾರ್ಮ್-6, ಹೆಸರು ತೆಗೆದುಹಾಕಲು ಅಥವಾ ಆಕ್ಷೇಪಣೆ ಸಲ್ಲಿಸಲು ಫಾರ್ಮ್-7 ಹಾಗೂ ವಿಳಾಸ ಬದಲಾವಣೆ ಮತ್ತು ಇತರ ತಿದ್ದುಪಡಿಗಳಿಗಾಗಿ ಫಾರ್ಮ್-8 ಬಳಸಬಹುದು. ಈ ಅರ್ಜಿಗಳನ್ನು voters.eci.gov.in ವೆಬ್ಸೈಟ್ ಅಥವಾ ECINET ಮೊಬೈಲ್ ಆ್ಯಪ್ ಮೂಲಕ ಸಲ್ಲಿಸಬಹುದು.


ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟುಹೋಗದಂತೆ ಹಾಗೂ ಅನರ್ಹರ ಹೆಸರುಗಳು ಸೇರ್ಪಡೆಯಾಗದಂತೆ ಚುನಾವಣಾ ನೋಂದಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತಪ್ಪಾಗಿ ಸಾಮೂಹಿಕವಾಗಿ ಹೆಸರುಗಳನ್ನು ತೆಗೆದುಹಾಕುವುದನ್ನು ತಡೆಯಲು ಫಾರ್ಮ್-7 ಅರ್ಜಿಗಳ ಸಲ್ಲಿಕೆಗೆ ಮಿತಿಯನ್ನೂ ವಿಧಿಸಲಾಗಿದೆ.
ಹೆಸರು ಕಡಿತಕ್ಕೆ ಕಟ್ಟುನಿಟ್ಟಿನ ಪರಿಶೀಲನೆ
ಯಾವುದೇ ಮತಗಟ್ಟೆಯಲ್ಲಿ ಮತದಾರರ ಹೆಸರು ಕಡಿತ ಪ್ರಮಾಣ ಶೇ.2 ಮೀರಿದರೆ ಅಥವಾ ಒಬ್ಬ ವ್ಯಕ್ತಿಯೇ ಐದಕ್ಕಿಂತ ಹೆಚ್ಚು ಹೆಸರುಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಿದರೆ, ಅಂತಹ ಪ್ರಕರಣಗಳನ್ನು ಚುನಾವಣಾ ನೋಂದಣಾಧಿಕಾರಿಗಳು (ERO) ಖುದ್ದಾಗಿ ಪರಿಶೀಲಿಸಲಿದ್ದಾರೆ.


ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರು (BLA) ಪ್ರತಿದಿನ ಗರಿಷ್ಠ 10 ಅರ್ಜಿಗಳನ್ನು ಮಾತ್ರ ಸಲ್ಲಿಸಬಹುದು. ಪರಿಷ್ಕರಣಾ ಅವಧಿಯಲ್ಲಿ ಒಬ್ಬ ಏಜೆಂಟ್ 30ಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ, ಚುನಾವಣಾ ನೋಂದಣಾಧಿಕಾರಿ ಅಥವಾ ಸಹಾಯಕ ಚುನಾವಣಾ ನೋಂದಣಾಧಿಕಾರಿ ಪರಿಶೀಲನೆ ನಡೆಸಲಿದ್ದಾರೆ.
ಇದಲ್ಲದೆ, ಬೂತ್ ಮಟ್ಟದ ಅಧಿಕಾರಿಗಳು (BLO) ಮತದಾರರ ಹೊಸ ಹಾಗೂ ಗುಣಮಟ್ಟದ ಭಾವಚಿತ್ರಗಳನ್ನು ಸಂಗ್ರಹಿಸಲಿದ್ದಾರೆ. ನಕಲಿ ಹೆಸರುಗಳು, ಮೃತಪಟ್ಟ ಮತದಾರರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ನಿಯಮಾನುಸಾರ ಪಟ್ಟಿಯಿಂದ ತೆಗೆದುಹಾಕಲು ಕ್ರಮ ಕೈಗೊಳ್ಳಲಾಗುತ್ತದೆ.


ನಗರ ಪ್ರದೇಶಗಳಲ್ಲಿ ಹೊಸ ಮತಗಟ್ಟೆ
ನಗರ ಪ್ರದೇಶದ ಮತದಾರರ ಅನುಕೂಲಕ್ಕಾಗಿ ಅಪಾರ್ಟ್ಮೆಂಟ್ಗಳು, ಗೃಹ ನಿರ್ಮಾಣ ಸೊಸೈಟಿಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ವಸತಿ ಪ್ರದೇಶಗಳು ಹಾಗೂ ಕೊಳೆಗೇರಿ ಪ್ರದೇಶಗಳಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ.
ವಲಸೆ ಕಾರ್ಮಿಕರು, ನಿರಾಶ್ರಿತರು, ಮಹಿಳೆಯರು, ತೃತೀಯಲಿಂಗಿಗಳು ಹಾಗೂ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ವಿಶೇಷ ಸಹಾಯ ಕೇಂದ್ರಗಳು ಮತ್ತು ಶಿಬಿರಗಳನ್ನು ಆಯೋಜಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.


ಅಧಿಕಾರಿಗಳ ವರ್ಗಾವಣೆಗೆ ನಿರ್ಬಂಧ
ಸಂವಿಧಾನದ 324ನೇ ವಿಧಿಯನ್ವಯ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಜಿಲ್ಲಾ ಚುನಾವಣಾಧಿಕಾರಿ (DEO), ಚುನಾವಣಾ ನೋಂದಣಾಧಿಕಾರಿ (ERO) ಹಾಗೂ ಸಹಾಯಕ ಚುನಾವಣಾ ನೋಂದಣಾಧಿಕಾರಿ (AERO) ಹುದ್ದೆಗಳು ಖಾಲಿ ಉಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ. ಅಲ್ಲದೆ, ಈ ಅಧಿಕಾರಿಗಳ ವರ್ಗಾವಣೆಯ ಮೇಲೆಯೂ ನಿರ್ಬಂಧ ವಿಧಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ.


