ಮೊಗರ್ಪಣೆ ನೂರುಲ್ ಇಸ್ಲಾಂ ಮದರಸದಲ್ಲಿ ಸ್ವಚ್ಛತೆ ಕುರಿತು ಅರಿವು ಉಪನ್ಯಾಸ, ಕರಪತ್ರ ವಿತರಣೆ

ಸುಳ್ಯ: ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ (ಅನ್ಸಾರ್), ಸುಳ್ಯ ಇದರ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುತ್ತಿರುವ ಸ್ವಚ್ಛತಾ ಮಾಸಾಚರಣೆಯ ಅಂಗವಾಗಿ ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧೀನದಲ್ಲಿರುವ ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸದಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಉಪನ್ಯಾಸ ಹಾಗೂ ಕರಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ಸಾರ್ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಇಬ್ರಾಹಿಂ ವಹಿಸಿದ್ದರು. ಸ್ಥಳೀಯ ಜುಮಾ ಮಸೀದಿಯ ಮುದರ್ರಿಸ್ ಅಬ್ದುಲ್ ಖಾದರ್ ಸಖಾಫಿ ಅಲ್ ಖಾಮಿಲ್ ಮುದುಗುಡ ಉಸ್ತಾದ್ ಪ್ರಾರ್ಥನೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಉಪನ್ಯಾಸ ನೀಡಿದ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಇಲ್ಯಾಸ್ ಕಾಶಿಪಟ್ನ ಅವರು, ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಉಡುಪು ಹಾಗೂ ದೇಹದ ಸ್ವಚ್ಛತೆಗೆ ಆದ್ಯತೆ ನೀಡಿ ಇತರರಿಗೆ ಮಾದರಿಯಾಗಬೇಕು. ಈ ಮೂಲಕ ಅನ್ಸಾರ್‌ನಂತಹ ಸಂಸ್ಥೆಗಳು ಹಮ್ಮಿಕೊಳ್ಳುವ ಸ್ವಚ್ಛತಾ ಅಭಿಯಾನಗಳು ನಿಜವಾದ ಅರ್ಥ ಪಡೆದುಕೊಳ್ಳುತ್ತವೆ ಎಂದು ಹೇಳಿದರು.

ಮನೆಯ ಕಸವನ್ನು ವಿಲೇವಾರಿ ಮಾಡುವಾಗ ಅನುಸರಿಸಬೇಕಾದ ಕ್ರಮಗಳು, ಪ್ಲಾಸ್ಟಿಕ್ ಕೈಚೀಲ ಸೇರಿದಂತೆ ಪರಿಸರಕ್ಕೆ ಹಾನಿಕಾರಕ ವಸ್ತುಗಳ ಬಳಕೆಯನ್ನು ತಡೆಗಟ್ಟುವ ಅಗತ್ಯದ ಕುರಿತು ಮಾಹಿತಿ ನೀಡಿದರು. ಸ್ವಚ್ಛ ಪರಿಸರ ನಿರ್ಮಾಣದ ಮೂಲಕ ಆರೋಗ್ಯಕರ ಜೀವನ ನಡೆಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷ ಸಿ.ಎಂ. ಉಸ್ಮಾನ್, ಕೋಶಾಧಿಕಾರಿ ಮಹಮ್ಮದ್ ಆದರ್ಶ, ನಿರ್ದೇಶಕ ಅಬ್ದುಲ್ ರಝಾಕ್ ಜಿ.ಕೆ., ಮದರಸ ಸದರ್ ಉಸ್ತಾದ್ ಅಬ್ದುಲ್ ಕರೀಂ ಸಖಾಫಿ, ಸ್ವಚ್ಛತಾ ಆಂದೋಲನದ ಸಂಚಾಲಕ ಹಾಜಿ ಯೂಕೂಬ್ ಎಸ್.ಟಿ., ಅನ್ಸಾರ್ ಕಾರ್ಯದರ್ಶಿ ಬಶೀರ್ ಸಪ್ನ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹನೀಫ್ ಸಂಗಮ್, ಜಮಾಅತ್ ಸದಸ್ಯ ಅಬ್ದುಲ್ ಲತೀಫ್ ಎಸ್.ಕೆ., ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಬಶೀರ್ ಕೆ.ಎಂ. ಸೇರಿದಂತೆ ಮದರಸ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಮಾಅತ್ ಕಾರ್ಯದರ್ಶಿ ರಹೀಂ ಸ್ವಾಗತಿಸಿದರು. ಅನ್ಸಾರ್ ಮ್ಯಾನೇಜರ್ ಮುನೀರ್ ವಂದಿಸಿದರು.

Leave a Reply

Your email address will not be published. Required fields are marked *