ಕ್ರೀಡೆಯಿಂದ ವಿದ್ಯಾರ್ಥಿಗಳ ಪ್ರತಿಭೆ, ಶಿಸ್ತು, ಆತ್ಮವಿಶ್ವಾಸ ಹಾಗೂ ತಂಡ ಮನೋಭಾವ ವೃದ್ಧಿ – ಪ್ರಾಂಶುಪಾಲ ಅನಿಶ್ ನಾದ್

ಸುಳ್ಯದ ಕೆವಿಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನವೆಂಬರ್ 19 ಮತ್ತು 20ರಂದು ಎರಡು ದಿನಗಳ ಕಾಲ ವಾರ್ಷಿಕ ಕ್ರೀಡೋತ್ಸವ ‘ಪ್ಲೇ ಎಕ್ಸೈಟ್’ ಸಂಭ್ರಮದಿಂದ ನಡೆಯಿತು.

ನವೆಂಬರ್ 19ರಂದು 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ನವೆಂಬರ್ 20ರಂದು 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮೊದಲ ದಿನ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನದೊಂದಿಗೆ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಂಚಾಲಕರಾದ ಡಾ. ರೇಣುಕಾ ಪ್ರಸಾದ್ ಹಾಗೂ ಡಾ. ಜ್ಯೋತಿ ಆರ್. ಪ್ರಸಾದ್ ಅವರು ಕ್ರೀಡೋತ್ಸವಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಪ್ರಾಂಶುಪಾಲ ಅನಿಶ್ ನಾದ್ ಅವರು, ಶಾಲಾ ಕ್ರೀಡಾಕೂಟವು ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿದೆ. ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ, ಸಹಕಾರ ಹಾಗೂ ತಂಡ ಮನೋಭಾವವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಎರಡು ದಿನಗಳ ಕಾಲ ವಿದ್ಯಾರ್ಥಿಗಳಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಶಾಲೆಯ ನಾಲ್ಕು ತಂಡಗಳಾದ ರೆಡ್ ರೂಬಿ, ಗ್ರೀನ್ ಎಮರಾಲ್ಡ್, ಯೆಲ್ಲೋ ಡೈಮಂಡ್ ಹಾಗೂ ಬ್ಲೂ ಸಫೈರ್ ತಂಡಗಳ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ಕೆವಿಜಿ ಐಪಿಎಸ್‌ನ ದೈಹಿಕ ಶಿಕ್ಷಣ ಶಿಕ್ಷಕಿಯರಾದ ಆಶಾ ಜ್ಯೋತಿ ಮತ್ತು ತೀರ್ಥವರ್ಣ ಬಳ್ಳಡ್ಕ, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಜಯಚಂದ್ರ ಹಾಗೂ ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಅಕ್ಷತಾ ಅವರ ಮಾರ್ಗದರ್ಶನದಲ್ಲಿ ಕ್ರೀಡಾ ಚಟುವಟಿಕೆಗಳು ಯಶಸ್ವಿಯಾಗಿ ನಡೆದವು.

ಕ್ರೀಡಾ ಸ್ಪರ್ಧೆಗಳ ಅಂತಿಮ ಫಲಿತಾಂಶದಲ್ಲಿ ರೆಡ್ ರೂಬಿ ತಂಡ ಪ್ರಥಮ ಸ್ಥಾನ, ಗ್ರೀನ್ ಎಮರಾಲ್ಡ್ ತಂಡ ದ್ವಿತೀಯ ಸ್ಥಾನ, ಬ್ಲೂ ಸಫೈರ್ ತಂಡ ತೃತೀಯ ಸ್ಥಾನ ಹಾಗೂ ಯೆಲ್ಲೋ ಡೈಮಂಡ್ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡವು.

ಕ್ರೀಡೋತ್ಸವದ ಅಂಗವಾಗಿ ಶಿಕ್ಷಕರಿಗೂ ವಿವಿಧ ಮನರಂಜನಾತ್ಮಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ, ಎ.ಒ.ಎಲ್.ಇ. ಕಮಿಟಿ ಬಿ ಇದರ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ ಅಡ್ತಲೆ, ಪ್ರಸನ್ನ ಕಲ್ಲಾಜೆ ಸೇರಿದಂತೆ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು 10ನೇ ತರಗತಿಯ ವಿದ್ಯಾರ್ಥಿನಿಯರಾದ ನಿಯಾ ಶೆಟ್ಟಿ ಹಾಗೂ ಪ್ರಪುಲ್ಲಾ ಅವರೊಂದಿಗೆ ಶಿಕ್ಷಕಿಯರಾದ ಹರ್ಷಿತಾ ಮತ್ತು ಭವ್ಯ ಕೆ. ನಿರೂಪಿಸಿದರು. ಮನಸ್ಸಿ ಆರ್. ಪ್ರಸಾದ್ ಸ್ವಾಗತಿಸಿ, ಕ್ಷಿತಿ ಎನ್. ಮುರೂರು ವಂದಿಸಿದರು.

ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆ, ಉತ್ಸಾಹ, ಪರಿಶ್ರಮ ಹಾಗೂ ಕ್ರೀಡಾಸ್ಫೂರ್ತಿಯ ಅನಾವರಣಕ್ಕೆ ಸಾಕ್ಷಿಯಾದ ‘ಪ್ಲೇ ಎಕ್ಸೈಟ್’ ವಾರ್ಷಿಕ ಕ್ರೀಡೋತ್ಸವವು ಯಶಸ್ವಿಯಾಗಿ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *