ಸಭೆಯಲ್ಲಿ ಗ್ರಾಮದಲ್ಲಿ ಸ್ವಚ್ಛತೆ ಬಗ್ಗೆ ಮತ್ತು ವಿವಿಧ ಮೂಲಭೂತ ಬೇಡಿಕೆಗಳ ಬಗ್ಗೆ ಚರ್ಚೆ
ಸಂಪಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮದ ವಿವಿಧ ಸಂಘ-ಸಂಸ್ಥೆಗಳು ಮತ್ತು ಧಾರ್ಮಿಕ ಕೇಂದ್ರಗಳ ಮುಖಂಡರುಗಳ ಸಭೆ ನವಂಬರ್ 22ರಂದು ನಡೆಯಿತು.ಪಂಚಾಯತ್ ಆಡಳಿತ ಅಧಿಕಾರಿ ಪ್ರಮೋದ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ವಾಹನ ಚಾಲಕ ಮಾಲಕರು ಹಾಗೂ ಆರೋಗ್ಯ, ಅಂಗನವಾಡಿ, ಕುಡಿಯುವ ನೀರಿನ ಪಂಪ್ ಚಾಲಕರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಧಾರ್ಮಿಕ ಕೇಂದ್ರದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಭಾಗವಹಿಸಿದವರು ಪ್ರಮುಖವಾಗಿ ಗ್ರಾಮದ ಸ್ವಚ್ಛತೆಯ ಅಭಿಪ್ರಾಯ ಮಂಡಿಸಿದರು.
ಗ್ರಾಮದಲ್ಲಿ ಸ್ವಚ್ಛತೆ ಬಗ್ಗೆ ವಿಶೇಷ ಒತ್ತು ನೀಡಲು, ಅಂದಾಜು 100 ಮೀಟರ್ ವ್ಯಾಪ್ತಿ ಅಂದರೆ ಒಂದು ಪ್ರಯಾಣಿಕರ ತಂಗು ದಾಣದಿಂದ ಇನ್ನೊಂದು ತಂಗುದಾಣದವರೆಗೆ ಒಂದೊಂದು ಸಂಘಟನೆ ನೇತೃತ್ವ ವಹಿಸಿ ಈ ತಿಂಗಳ 26ನೇ ತಾರಿಕಿನಂದು ಗ್ರಾಮದ ಸಂಪಾಜೆ ಗೇಟ್ ಹತ್ತಿರದಿಂದ ಪೆಲ್ತಡ್ಕತನಕ ಸ್ವಚ್ಛತಾ ಕಾರ್ಯ ಮಾಡುವ ಬಗ್ಗೆ ಹಾಜರಿದ್ದ ಸದಸ್ಯರಿಗೆ ಜವಾಬ್ದಾರಿ ನೀಡಲಾಯಿತು.

ಸಭೆಯಲ್ಲಿ ಗ್ರಾಮದ ವರ್ತಕರು ಪ್ಲಾಸ್ಟಿಕ್ ಚೀಲ ಕಡಿಮೆ ಮಾಡಿ ಗ್ರಾಹಕರಿಗೆ ಬಟ್ಟೆ ಚೀಲ ತರಲು ವಿನಂತಿ ಮಾಡಿದರು. ಪೇಟೆಯಲ್ಲಿ ಬೇರೆ ಬೇರೆ ವಸ್ತುಗಳನ್ನು ಮಾರಾಟ ಮಾಡುವುದರಿಂದ ತೆರಿಗೆ ಹಾಗೂ ಲೈಸೆನ್ಸ್ ಪಡೆದು ಮಾರಾಟ ಮಾಡುವ ಅಂಗಡಿಯವರಿಗೆ ತೊಂದರೆ ಆಗುತ್ತಿದೆ ಈ ಬಗ್ಗೆ ಗಮನ ನೀಡುವ ಬಗ್ಗೆ ವರ್ತಕರು ವಿನಂತಿ ಮಾಡಿದರು.

ನೆಲ್ಲಿಕುಮೇರಿ ಭಾಗದಿಂದ ಕಲ್ಲುಗುಂಡಿ ಪೇಟೆಗೆ ಹರಿದು ಬರುತಿರುವ ಚರಂಡಿಯಲ್ಲಿ ಪ್ಲಾಸ್ಟಿಕ್ ವಸ್ತುಗಳು ಬರುತಿದ್ದು ಕಲ್ಲುಗುಂಡಿ ಪೇಟೆಯಲ್ಲಿ ತೊಂದರೆ ಆಗುತ್ತಿರುವ ಬಗ್ಗೆ ವರ್ತಕರು ಪ್ರಸ್ತಾಪ ಮಾಡಿದರು. ಗುಜರಿ ವಸ್ತುಗಳು ರಸ್ತೆ ಬದಿಯಲ್ಲಿ ಇದ್ದು ಸ್ವಚ್ಛತೆ ಇಲ್ಲ ಈ ಬಗ್ಗೆ ಗಮನ ಹರಿಸಲು ವಿನಂತಿ ಮಾಡಲಾಯಿತು.
ಪ್ರತಿ ಅಂಗಡಿಯವರು ಅವರವರ ಪರಿಸರ ಸ್ವಚ್ಛ ಗೊಳಿಸುವುದು ತಪ್ಪಿದಲ್ಲಿ ನೋಟಿಸ್ ನೀಡಿ ದಂಡನೆ ವಸೂಲಿಗೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಪ್ರತಿ ಅಂಗಡಿ ವಾಣಿಜ್ಯ ಸಂಕೀರ್ಣದವರು ಹಸಿ ಕಸ ಒಣ ಕಸ ವಿಂಗಡಿಸಿ ಕೊಡುವುದು ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ಪೇಟೆಯಲ್ಲಿ ಇರುವ ಸಾರ್ವಜನಿಕ ಶೌಚಾಲಯದ ಸ್ವಚ್ಛತೆ ಬಗ್ಗೆ ಹಾಗೂ ನಿರ್ವಹಿಸಲು ಖಾಸಗಿಯವರಿಗೆ ನೀಡಲು ಪ್ರಸ್ತಾಪವಾಯಿತು.

ನವಂಬರ್ 26ರಂದು ಗ್ರಾಮ ವ್ಯಾಪ್ತಿಯಲ್ಲಿ ಸ್ವಚ್ಛತೆ ಮಾಡಲು ಜವಾಬ್ದಾರಿ ವಹಿಸಿ ಸ್ಥಳ ನಿಗದಿ ಮಾಡಲಾಯಿತು. ಮುಂದೆ ಪ್ರತಿ ತಿಂಗಳ 3ನೇ ಶನಿವಾರ ಸ್ವಚ್ಛತೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪಂಚಾಯತ್ ಅಬಿವೃದಿ ಅಧಿಕಾರಿ ಜಯಪ್ರಕಾಶ್ ಸ್ವಚ್ಛತೆಯ ಬಗ್ಗೆ ವಿವರವಾಗಿ ತಿಳಿಸಿ ಗ್ರಾಮಸ್ಥರ ಸಂಘ ಸಂಸ್ಥೆಗಳ ಸಹಕಾರ ಕೋರಿದರು ಹಾಗೂ ಸಾರ್ವಜನಿಕರ ಬೇಡಿಕೆಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಪ್ರತಿನಿಧಿಗಳು, ಪಂಚಾಯತ್ ಮಾಜಿ ಅಧ್ಯಕ್ಷರು, ಸದಸ್ಯರುಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಾಜರಿದ್ದು ಅಭಿಪ್ರಾಯ ಮಂಡಿಸಿದರು. ಮಾಜಿ ಅಧ್ಯಕ್ಷರು ಹಾಗೂ ನೀರು ನೈರ್ಮಲ್ಯ ಸಮಿತಿ ಸದಸ್ಯರಾದ ಜಿ ಕೆ ಹಮೀದ್ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಎಸ್. ಕೆ ಹನೀಫ್ ವಂದಿಸಿದರು.
ಮಾಜಿ ಅಧ್ಯಕ್ಷರು ನೀರು ನೈರ್ಮಲ್ಯ ಸಮಿತಿ ಸದಸ್ಯರಾದ ಸುಮತಿ ಶಕ್ತಿವೇಲು, ಮಾಜಿ ಪಂಚಾಯತ್ ಸದಸ್ಯರು ನೀರು ನೈರ್ಮಲ್ಯ ಸಮಿತಿ ಸದಸ್ಯರಾದ ನಾಗೇಶ್ ಪೆರಾಲು, ಮಾಜಿ ಸದಸ್ಯರು ನೀರು ನೈರ್ಮಲ್ಯ ಸಮಿತಿ ಸದಸ್ಯರಾದ ಅನುಪಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮೋಹನ್ ಸಾರ್ವಜನಿಕರ ಅಭಿಪ್ರಾಯ ದಾಖಲಿಸಿದರು.



