ಅಭಿನಯ ಗೀತೆ, ಇಂಗ್ಲಿಷ್ ಕಂಠಪಾಠದಲ್ಲಿ ಪ್ರಥಮ ಸ್ಥಾನ; ತಾಲೂಕು ಮಟ್ಟಕ್ಕೆ ಆಯ್ಕೆ
ಗುಡ್ಡೆಹೊಸೂರು: ನಂಜರಾಯಪಟ್ಟಣ-ವಾಲ್ನೂರು ತ್ಯಾಗತ್ತೂರು ಸರ್ಕಾರಿ ಶಾಲೆಯಲ್ಲಿ ನಡೆದ ಪ್ರಾಥಮಿಕ ಶಾಲಾ ವಿಭಾಗದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಗುಡ್ಡೆಹೊಸೂರು ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಎರಡು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಅಭಿನಯ ಗೀತೆ ಸ್ಪರ್ಧೆಯಲ್ಲಿ ಐದನೇ ತರಗತಿಯ ವಿದ್ಯಾರ್ಥಿನಿ ಕು. ಮೋಕ್ಷಿತಾ ಪ್ರಥಮ ಸ್ಥಾನ ಪಡೆದರೆ, ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ ಐದನೇ ತರಗತಿಯ ವಿದ್ಯಾರ್ಥಿ ಮನ್ವಿತ್ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದಲ್ಲದೆ, ಎರಡನೇ ತರಗತಿಯ ವಿದ್ಯಾರ್ಥಿ ಮುಜಮಿಲ್ ವೇಷಭೂಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಆರನೇ ತರಗತಿಯ ವಿದ್ಯಾರ್ಥಿ ಶ್ರೇಯಸ್ ಮಿಮಿಕ್ರಿಯಲ್ಲಿ ದ್ವಿತೀಯ ಸ್ಥಾನ, ಏಳನೇ ತರಗತಿಯ ವಿದ್ಯಾರ್ಥಿ ಭುವನ್ ಆಶುಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಆರನೇ ತರಗತಿಯ ವಿದ್ಯಾರ್ಥಿನಿ ಧಿಯಾ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಭಿನಯ ಗೀತೆ ಸ್ಪರ್ಧೆಯಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಕೀರ್ತನ ನಾಲ್ಕನೇ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.


ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಎಚ್.ಎಸ್. ಭಾಗ್ಯ ಹಾಗೂ ಶಿಕ್ಷಕರಾದ ಯಶುಮತಿ, ರುಕ್ಮಿಣಿ ಕೆ.ಎನ್., ಗೀತಾ ಬಿ.ಎನ್. ಮತ್ತು ಚಂದ್ರಶೇಖರ್ ಬಿ.ಕೆ. ಅವರು ಮಾರ್ಗದರ್ಶನ ನೀಡಿದ್ದಾರೆ.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಪೋಷಕರಾದ ನಾಗೇಂದ್ರ ಆರ್. ಅವರು ಶಾಲೆಯ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ಸಹಕಾರ ನೀಡುತ್ತಿದ್ದಾರೆ.






