ತುಮಕೂರು: ವಿವಾಹಿತ ಮಹಿಳೆಯನ್ನು ಮದುವೆಯಾಗುವುದಾಗಿ ಹಠ ಹಿಡಿದಿದ್ದ ಮಗನನ್ನು ತಾಯಿಯೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ತುಮಕೂರು ತಾಲೂಕಿನ ಜಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಿವಮ್ಮ ಎಂಬ ಆರೋಪಿತ ತಾಯಿಯನ್ನು ತುಮಕೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಮೂರು ದಿನಗಳ ಹಿಂದಷ್ಟೇ ಬೆಂಗಳೂರಿನಿಂದ ಗ್ರಾಮಕ್ಕೆ ಬಂದಿದ್ದ ಮಗ
ಕೊಲೆಯಾದ ಯುವಕನನ್ನು ಮುತ್ತುರಾಜ್ ಎಂದು ಗುರುತಿಸಲಾಗಿದೆ. ಜೀವನೋಪಾಯಕ್ಕಾಗಿ ಬೆಂಗಳೂರಿಗೆ ತೆರಳಿದ್ದ ಮುತ್ತುರಾಜ್ ಕಳೆದ ಎರಡು ತಿಂಗಳಿಂದ ಅಲ್ಲಿ ಕೆಲಸ ಮಾಡುತ್ತಿದ್ದನು. ಘಟನೆ ನಡೆಯುವುದಕ್ಕೆ ಕೇವಲ ಮೂರು ದಿನಗಳ ಹಿಂದಷ್ಟೇ ಸ್ವಗ್ರಾಮ ಜಕ್ಕೇನಹಳ್ಳಿಗೆ ವಾಪಸ್ ಆಗಿದ್ದನು.
ಮುತ್ತುರಾಜ್ ತಂದೆ ಪುಟ್ಟಯ್ಯ, ತಾಯಿ ಶಿವಮ್ಮ, ಸಹೋದರಿ ನರಸಮ್ಮ ಹಾಗೂ ಆಕೆಯ ಪುಟ್ಟ ಮಗುವಿನೊಂದಿಗೆ ವಾಸವಾಗಿದ್ದನು.


ರಾತ್ರಿ ಖುಷಿಯಾಗಿದ್ದ ಮಗ ಬೆಳಗಾಗುವಷ್ಟರಲ್ಲಿ ಹೆಣ!
ಘಟನೆ ನಡೆದ ಹಿಂದಿನ ದಿನ ಸಂಜೆ ಮುತ್ತುರಾಜ್ ಮನೆಗೆ ಗೋಬಿ ಮಂಚೂರಿ ತಂದು ಕುಟುಂಬದವರಿಗೆ ಹಂಚಿದ್ದನು. ಅಲ್ಲದೆ, ಮನೆಯವರಿಗೆ ಪ್ರಸಾದವನ್ನೂ ವಿತರಿಸಿ ಸಂತೋಷದಿಂದ ಇದ್ದನು.
ರಾತ್ರಿ ಊಟ ಮುಗಿಸಿದ ಬಳಿಕ ಮನೆಯ ಹೊರಭಾಗದಲ್ಲಿ ಚಾಪೆ ಹಾಸಿಕೊಂಡು ಮಲಗಿದ್ದನು. ಮರುದಿನ ಬೆಳಗ್ಗೆ ಸಹೋದರಿ ನರಸಮ್ಮ ಮನೆಯಿಂದ ಹೊರಬಂದು ನೋಡಿದಾಗ ಮುತ್ತುರಾಜ್ ತಲೆಗೆ ಹೊದಿಕೆ ಹೊದ್ದು ಮಲಗಿದ್ದನು.
ಆತನನ್ನು ಎಬ್ಬಿಸಲು ಹತ್ತಿರ ಹೋದಾಗ ಚಾಪೆಯ ಮೇಲೆ ರಕ್ತದ ಕಲೆಗಳು ಕಾಣಿಸಿಕೊಂಡಿವೆ. ಪರಿಶೀಲಿಸಿದಾಗ ತಲೆಗೆ ತೀವ್ರ ಗಾಯವಾಗಿದ್ದು, ಮುತ್ತುರಾಜ್ ಸ್ಥಳದಲ್ಲೇ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.


ವಿವಾಹಿತ ಮಹಿಳೆಯನ್ನು ಮದುವೆಯಾಗುವ ಹಠವೇ ಕೊಲೆಗೆ ಕಾರಣ?
ಮುತ್ತುರಾಜ್ ಅದೇ ಗ್ರಾಮದ ಬೇರೆ ಜಾತಿಯ ವಿವಾಹಿತ ಮಹಿಳೆಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆಕೆಗೆ ಈಗಾಗಲೇ ಇಬ್ಬರು ಮಕ್ಕಳಿದ್ದರು. ಆದರೂ ಆಕೆಯನ್ನೇ ಮದುವೆಯಾಗುವುದಾಗಿ ಮುತ್ತುರಾಜ್ ಹಠ ಹಿಡಿದಿದ್ದನು.
ಮಗನ ಈ ನಿರ್ಧಾರದಿಂದ ತಾಯಿ ಶಿವಮ್ಮ ತೀವ್ರ ಅಸಮಾಧಾನಗೊಂಡಿದ್ದಳು. ಹಲವು ಬಾರಿ ಬುದ್ಧಿವಾದ ಹೇಳಿದರೂ ಮಗ ತನ್ನ ನಿರ್ಧಾರದಿಂದ ಹಿಂದೆ ಸರಿಯದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.


ಅಕ್ಕಪಕ್ಕದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಯ್ತು ತಾಯಿಯ ಕೃತ್ಯ!
ಕುಟುಂಬದವರೆಲ್ಲರೂ ಗಾಢ ನಿದ್ರೆಯಲ್ಲಿದ್ದ ವೇಳೆ ಶಿವಮ್ಮ ಮನೆಯ ಹೊರಗೆ ಮಲಗಿದ್ದ ಮಗ ಮುತ್ತುರಾಜ್ ಮೇಲೆ ಮರದ ದೊಣ್ಣೆ ಅಥವಾ ರಾಡ್‌ನಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತುಮಕೂರು ನಗರ ಡಿವೈಎಸ್ಪಿ ಚಂದ್ರಶೇಖರ್ ಹಾಗೂ ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದರು.
ಈ ವೇಳೆ ಅಕ್ಕಪಕ್ಕದ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ತಾಯಿ ಶಿವಮ್ಮ ಮಗನ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸೆರೆಯಾಗಿರುವುದು ಬೆಳಕಿಗೆ ಬಂದಿದೆ.

ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಆರೋಪಿತೆ
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಶಿವಮ್ಮಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಗನ ಮದುವೆ ವಿಚಾರದಿಂದ ಬೇಸತ್ತು ತಾನೇ ಕೊಲೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ತುಮಕೂರು ಗ್ರಾಮಾಂತರ ಪೊಲೀಸರು ಆರೋಪಿತೆ ಶಿವಮ್ಮಳನ್ನು ಬಂಧಿಸಿದ್ದು, ಪ್ರಕರಣದ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಮದುವೆ ವಿಚಾರವಾಗಿ ಹೆತ್ತ ತಾಯಿಯೇ ಮಗನನ್ನು ಕೊಲೆ ಮಾಡಿರುವ ಘಟನೆ ಜಕ್ಕೇನಹಳ್ಳಿ ಗ್ರಾಮದಲ್ಲಿ ತೀವ್ರ ಆಘಾತ ಮೂಡಿಸಿದೆ.




