ಮಲಯಾಳಿ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ಆರೋಪ: ಕಾನೂನು ಕ್ರಮಕ್ಕೆ ಕೊಡಗು ಹಿಂದೂ ಮಲಯಾಳಿ ಸಮಾಜ ಆಗ್ರಹ

ಗೋಣಿಕೊಪ್ಪಲು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಲಯಾಳಿ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಕೊಡಗು ಹಿಂದೂ ಮಲಯಾಳಿ ಸಮಾಜದ ಗೋಣಿಕೊಪ್ಪಲು ಘಟಕದ ವತಿಯಿಂದ ಗೋಣಿಕೊಪ್ಪಲು ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಅಲ್ಲದೆ, ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಪ್ರತಾಪ್ ಸಿಂಹ ಅವರು ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕವಾಗಿ ಭಾಷಣ ಮಾಡುವ ಸಂದರ್ಭದಲ್ಲಿ ಮಲಯಾಳಿ ಸಮುದಾಯದ ಕುರಿತು ಅವಹೇಳನಕಾರಿ, ನಿಂದನಾತ್ಮಕ ಹಾಗೂ ದ್ವೇಷ ಭಾವನೆ ಮೂಡಿಸುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸಮಾಜದ ಪದಾಧಿಕಾರಿಗಳು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ಕೊಡಗು ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಪ್ರಶಾಂತ್, ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕೊಡಗು ಜಿಲ್ಲೆಯಲ್ಲಿ ಕೇರಳ ಮೂಲದ ಮಲಯಾಳಿ ಜನರು ಅತಿಕ್ರಮಣ ಮಾಡುತ್ತಿದ್ದಾರೆ ಹಾಗೂ ಕೊಡಗಿನ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂಬರ್ಥ ಬರುವಂತೆ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

ಕೊಡಗು ಜಿಲ್ಲೆಯಲ್ಲಿ ಮಲಯಾಳಿ ಸಮುದಾಯದವರು ಹಲವು ದಶಕಗಳಿಂದ ಕನ್ನಡಿಗರು, ಕೊಡವರು ಸೇರಿದಂತೆ ಇತರ ಸಮುದಾಯಗಳೊಂದಿಗೆ ಸೌಹಾರ್ದಯುತವಾಗಿ ಸಹಬಾಳ್ವೆ ನಡೆಸುತ್ತಿದ್ದಾರೆ. ಜಿಲ್ಲೆಯ ಕೃಷಿ, ವ್ಯಾಪಾರ, ಶಿಕ್ಷಣ, ಉದ್ಯಮ ಹಾಗೂ ಕಾರ್ಮಿಕ ವಲಯ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಸಮುದಾಯದ ಕೊಡುಗೆ ಮಹತ್ವದ್ದಾಗಿದೆ. ಇಂತಹ ಸಮುದಾಯದ ಕುರಿತು ಆಧಾರರಹಿತವಾಗಿ ಮಾತನಾಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಮಾಜದ ಸ್ಥಾಪಕಾಧ್ಯಕ್ಷ ಹಾಗೂ ಗೌರವಾಧ್ಯಕ್ಷ ಶರತ್ ಕಾಂತ್ ಮಾತನಾಡಿ, ಸಾರ್ವಜನಿಕ ಕ್ಷೇತ್ರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದ ವ್ಯಕ್ತಿಯೊಬ್ಬರು ಇಂತಹ ಹೇಳಿಕೆಗಳನ್ನು ನೀಡುವುದು ಸಮಾಜದಲ್ಲಿ ಅನಗತ್ಯ ದ್ವೇಷ, ಅಸಹನೆ ಹಾಗೂ ಸಮುದಾಯಗಳ ನಡುವೆ ವೈಮನಸ್ಸು ಮೂಡಿಸಲು ಕಾರಣವಾಗಬಹುದು. ಪ್ರತಾಪ್ ಸಿಂಹ ಅವರ ಹೇಳಿಕೆಯಿಂದ ಕೊಡಗಿನ ಮಲಯಾಳಿ ಸಮುದಾಯದ ಜನರ ಭಾವನೆಗಳಿಗೆ ನೋವುಂಟಾಗಿದ್ದು, ಸಮುದಾಯದ ಗೌರವ ಮತ್ತು ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಹೇಳಿದರು.

ನಾವು ಯಾವುದೇ ರಾಜಕೀಯ ಪಕ್ಷದ ಪರವಾಗಿಯೂ ಅಥವಾ ವಿರುದ್ಧವಾಗಿಯೂ ಈ ದೂರು ಸಲ್ಲಿಸುತ್ತಿಲ್ಲ. ನಮ್ಮ ಸಮುದಾಯದ ಗೌರವ, ಸ್ವಾಭಿಮಾನ ಹಾಗೂ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಗಾಗಿ ದೂರು ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಕೊಡಗು ಹಿಂದೂ ಮಲಯಾಳಿ ಸಮಾಜದ ಉಪಾಧ್ಯಕ್ಷ ಸಿ.ಕೆ. ವೇಣುಗೋಪಾಲ್, ಕೆ.ಎನ್.ಎಸ್.ಎಸ್ ಅಧ್ಯಕ್ಷ ಸಂಜೀವ, ವಿಶ್ವಕರ್ಮ ಸಂಘದ ಅಧ್ಯಕ್ಷ ಮಣಿಕಂಠ, ಎಸ್.ಎನ್.ಡಿ.ಪಿ ಜಂಟಿ ಕಾರ್ಯದರ್ಶಿ ಸುದೀರ್, ಕೆ.ಎನ್.ಎಸ್.ಎಸ್ ಖಜಾಂಚಿ ಭಾಸ್ಕರ್, ವಿಶ್ವಕರ್ಮ ಸಂಘದ ಕಾರ್ಯದರ್ಶಿ ರಾಘವ ಹಾಗೂ ಎಸ್.ಎನ್.ಡಿ.ಪಿ ಸದಸ್ಯ ಸಪ್ತಾಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *