ಕೊಡಗಿನ ಏಕತೆಯನ್ನು ಒಡೆಯುವ ಪ್ರಯತ್ನಗಳನ್ನು ಜನತೆ ತಿರಸ್ಕರಿಸಲಿದ್ದಾರೆ: ಪೊನ್ನಣ್ಣ
ವಿರಾಜಪೇಟೆ: ಮಲಯಾಳಿ ಸಮುದಾಯದ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ತೀವ್ರವಾಗಿ ಖಂಡಿಸಿದ್ದಾರೆ.



ಮಲಯಾಳಿ ಸಮುದಾಯವು ಕೊಡಗಿನ ಸಂಸ್ಕೃತಿಯೊಂದಿಗೆ ಬೆರೆತು, ಇಲ್ಲಿನ ಜನರೊಂದಿಗೆ ಅನ್ಯೋನ್ಯವಾಗಿ ಬದುಕು ಸಾಗಿಸುತ್ತಿದೆ. ಸಮುದಾಯದ ಪ್ರಮುಖ ಹಬ್ಬವಾದ ಓಣಂ ಸೇರಿದಂತೆ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಕೊಡಗಿನ ಜನರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಓಣಂ ಔತಣಕೂಟದಲ್ಲಿಯೂ ಭಾಗವಹಿಸಿ ಹಬ್ಬದ ಸಂತೋಷವನ್ನು ಪರಸ್ಪರ ಹಂಚಿಕೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ.



ಕೊಡಗಿನ ಏಕತೆಯನ್ನು ಒಡೆಯುವ ಪ್ರತಿಯೊಂದು ಪ್ರಯತ್ನವೂ ಈ ಹಿಂದೆ ವಿಫಲವಾಗಿದೆ. ಇಂತಹ ಪ್ರಯತ್ನಗಳನ್ನು ಜನತೆ ಮುಂದೆಯೂ ತಿರಸ್ಕರಿಸಲಿದ್ದಾರೆ. ಪ್ರತಾಪ್ ಸಿಂಹ ಅವರು ಹಿಂದಿನಿಂದಲೂ ಕೊಡಗಿನಲ್ಲಿ ಸಮಾಜಗಳ ನಡುವೆ ಒಡಕು ಮೂಡಿಸುವಂತಹ ಹೇಳಿಕೆಗಳನ್ನು ನೀಡುತ್ತಾ ರಾಜಕೀಯ ಮಾಡುತ್ತಿದ್ದಾರೆ ಎಂದು ಪೊನ್ನಣ್ಣ ಆರೋಪಿಸಿದ್ದಾರೆ.



ಇಂತಹ ಹೇಳಿಕೆಗಳಿಂದ ಕೊಡಗಿನ ಜನತೆಯ ನಡುವಿನ ಸಾಮರಸ್ಯವನ್ನು ಹಾಳು ಮಾಡಲು ಸಾಧ್ಯವಿಲ್ಲ. ಕೊಡಗಿನ ಎಲ್ಲಾ ಸಮುದಾಯಗಳ ನಡುವೆ ಇರುವ ಸೌಹಾರ್ದತೆ ಮತ್ತು ಏಕತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಲಯಾಳಿ ಸಮುದಾಯದ ಹಿತಾಸಕ್ತಿಯನ್ನು ಕಾಪಾಡಲು ನಾವು ಸದಾ ಬದ್ಧರಾಗಿದ್ದೇವೆ ಎಂದು ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದ್ದಾರೆ.










