ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯ ಸಂಬಂಧ ದುರಂತ ಅಂತ್ಯ ಕಂಡಿದೆ. ಅನೈತಿಕ ಸಂಬಂಧದ ಅನುಮಾನದಿಂದ ಪ್ರಿಯಕರನೇ ತನ್ನ ಪ್ರಿಯತಮೆಯನ್ನು ಲಾಡ್ಜ್ ಕೊಠಡಿಯಲ್ಲಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಾಟನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೇರಳ ಮೂಲದ ಗಂಗಾ ಕೊಲೆಯಾದ ಯುವತಿಯಾಗಿದ್ದು, ಹತ್ಯೆ ಆರೋಪದ ಮೇಲೆ ಆಕೆಯ ಪ್ರಿಯಕರ ಗೋಕುಲ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.



ನಾಲ್ಕು ವರ್ಷಗಳ ಪ್ರೀತಿ, ಉದ್ಯೋಗ ಅರಸಿ ಬೆಂಗಳೂರಿಗೆ ಆಗಮನ
ಕೇರಳ ಮೂಲದ ಗಂಗಾ ಮತ್ತು ಗೋಕುಲ್ ಇಬ್ಬರೂ ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ, ಬೆಂಗಳೂರಿನಲ್ಲಿ ಉದ್ಯೋಗ ಹುಡುಕುವ ಸಲುವಾಗಿ ನಗರಕ್ಕೆ ಬಂದಿತ್ತು. ಗುರುವಾರ (ನ. 26) ಕಾಟನ್ಪೇಟೆಯ ಮಸ್ತಾನ್ ದರ್ಗಾ ಬಳಿಯಿರುವ ರೆಜೆನ್ಸಿ ಲಾಡ್ಜ್ನಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದು ತಂಗಿದ್ದರು.



ಅನೈತಿಕ ಸಂಬಂಧದ ಅನುಮಾನದಿಂದ ಜಗಳ?
ಲಾಡ್ಜ್ನಲ್ಲಿ ತಂಗಿದ್ದ ವೇಳೆ ಗಂಗಾ ಬೇರೊಬ್ಬ ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ ಎನ್ನಲಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದ್ದು, ಗೋಕುಲ್ ಗಂಗಾಳನ್ನು ಕೊಠಡಿಯೊಳಗೆ ಹತ್ಯೆಗೈದಿದ್ದಾನೆ ಎಂದು ಶಂಕಿಸಲಾಗಿದೆ.



ಲಾಡ್ಜ್ನಲ್ಲಿ ರಕ್ತದ ಕಲೆಗಳು
ಹತ್ಯೆ ನಡೆದ ಲಾಡ್ಜ್ ಕೊಠಡಿಯ ಹಾಸಿಗೆಯ ಮೇಲೆ ಹಾಗೂ ಹೊರಗಿನ ಮೆಟ್ಟಿಲುಗಳ ಮೇಲೆ ರಕ್ತದ ಕಲೆಗಳು ಪತ್ತೆಯಾಗಿವೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾಟನ್ಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಶ್ವಾನದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ತಂಡವೂ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.



ಆರೋಪಿ ವಿಚಾರಣೆ ಚುರುಕು
ಸದ್ಯ ಗೋಕುಲ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಹತ್ಯೆಗೆ ನಿಖರ ಕಾರಣವೇನು? ಕೃತ್ಯಕ್ಕೆ ಯಾವ ಆಯುಧ ಬಳಸಲಾಗಿದೆ? ಇದು ಪೂರ್ವನಿಯೋಜಿತ ಹತ್ಯೆಯೇ ಅಥವಾ ಕ್ಷಣಿಕ ಜಗಳದ ಪರಿಣಾಮವಾಗಿ ನಡೆದ ಕೃತ್ಯವೇ? ಎಂಬ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.






