ಸಮಸ್ಯೆಗಳಲ್ಲಿ ಸಿಲುಕಿಕೊಂಡಿರುವ ಸಾಲ ಪಡೆದವರು
ಕಳೆದ ಕೆಲವು ದಿನಗಳಿಂದ ಚಿನ್ನದ ದರದಲ್ಲಿ ಬಾರಿ ಇಳಿಕೆಗಳು ಕಂಡು ಬರುತ್ತಿದ್ದು ಇದರಿಂದ ಚಿನ್ನ ಅಡವಿಟ್ಟು ಸೊಸೈಟಿ ಮತ್ತು ಬ್ಯಾಂಕುಗಳಿಂದ ಸಾಲ ಪಡೆದವರು ಕಂಗಾಲಾಗಿದ್ದಾರೆ. ಚಿನ್ನದ ದರ ಕಡಿಮೆಯಾಗುತ್ತಿದ್ದಂತೆ ಸಾಲ ಪಡೆದವರಿಗೆ ಬ್ಯಾಂಕುಗಳಿಂದ ನೋಟಿಸುಗಳು ಬರಲು ಆರಂಭಿಸಿದೆ.

ಚಿನ್ನದ ಬೆಲೆ ಇಳಿದರೆ ಅಡವಿಟ್ಟ ಚಿನ್ನದ ಮೇಲಿನ ಸಾಲಕ್ಕೂ ಪರಿಣಾಮ ಬೀರುತ್ತೆ ಎಂದು ಹೇಳಲಾಗುತ್ತಿದೆ. ಚಿನ್ನದ ಬೆಲೆ ಕುಸಿದಾಗ ಕೆಲವು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಗೋಲ್ಡ್ ಲೋನ್ ಪಡೆದ ಗ್ರಾಹಕರಿಗೆ ‘ಮಾರ್ಜಿನ್ ಕಾಲ್ ನೋಟಿಸ್’ ಕಳುಹಿಸುತ್ತಿವೆ.

ಅಷ್ಟಕ್ಕೂ ಇದಕ್ಕೆ ಕಾರಣ LTV ನಿಯಮ
LTV ಅಂದರೆ ನೀವು ಅಡವಿಟ್ಟ ಚಿನ್ನದ ಮೌಲ್ಯಕ್ಕೆ ಹೋಲಿಸಿದರೆ ಪಡೆದಿರುವ ಸಾಲದ ಪ್ರಮಾಣ. RBI ನಿಯಮದಂತೆ ವೈಯಕ್ತಿಕ ಬಳಕೆಯ ಗೋಲ್ಡ್ ಲೋನ್‌ಗಳಿಗೆ ₹2.5 ಲಕ್ಷದವರೆಗೆ ಶೇ.85, ₹2.5 ಲಕ್ಷದಿಂದ ₹5 ಲಕ್ಷದವರೆಗೆ ಶೇ.80 ಹಾಗೂ ₹5 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ ಶೇ.75ರಷ್ಟು ಗರಿಷ್ಠ LTV ಮಿತಿ ಇದೆ.

ಉದಾಹರಣೆಗೆ, 8 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಅಡವಿಟ್ಟು 6 ಲಕ್ಷ ಸಾಲ ಪಡೆದಿದ್ದೀರಿ ಎಂದಿಟ್ಟುಕೊಳ್ಳಿ. ಚಿನ್ನದ ಬೆಲೆ ಇಳಿದು ಅದರ ಮೌಲ್ಯ 7 ಲಕ್ಷಕ್ಕೆ ಬಂದರೆ, ಶೇ.75ರ ಲೆಕ್ಕದಲ್ಲಿ ಸಾಲದ ಮಿತಿ 5.25 ಲಕ್ಷವಾಗುತ್ತದೆ. ಆಗ 75 ಸಾವಿರ ರೂಪಾಯಿಗಳ ವ್ಯತ್ಯಾಸ ಉಂಟಾಗುತ್ತದೆ ಎಂದು ಬ್ಯಾಂಕುಗಳ ಲೆಕ್ಕಾಚಾರವಾಗಿದೆ. ವಿಶೇಷವಾಗಿ ಸಾಲದ ಅವಧಿ ಮುಗಿದಾಗ ಅಸಲು ಮತ್ತು ಬಡ್ಡಿಯನ್ನು ಒಟ್ಟಿಗೆ ಪಾವತಿಸುವ Bullet Repayment Loan ಪಡೆದವರು ತಮ್ಮ ಸಾಲದ LTV ಬಗ್ಗೆ ಹೆಚ್ಚು ಗಮನಹರಿಸಬೇಕು.

ಬ್ಯಾಂಕ್‌ನಿಂದ ನೋಟಿಸ್ ಬಂದರೆ ಏನು ಮಾಡಬೇಕು?
ಗಾಬರಿಯಾಗಬೇಡಿ. ನೋಟಿಸ್‌ನಲ್ಲಿರುವ ಮೊತ್ತ ಮತ್ತು ಗಡುವನ್ನು ಪರಿಶೀಲಿಸಿ. ಬ್ಯಾಂಕ್‌ನೊಂದಿಗೆ ಮಾತನಾಡಿ, ಭಾಗಶಃ ಸಾಲ ಮರುಪಾವತಿ ಅಥವಾ ಹೆಚ್ಚುವರಿ ಭದ್ರತೆ ನೀಡುವ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಿ.












