ಬೆಂಗಳೂರು/ಮಡಿಕೇರಿ: ಕರ್ನಾಟಕ ವಿಧಾನಸಭೆಯು ಕಸ್ತೂರಿ ರಂಗನ್ ವರದಿಯನ್ನು ಸರ್ವಾನುಮತದಿಂದ ತಿರಸ್ಕರಿಸುವ ಮೂಲಕ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಈ ನಿರ್ಣಯವು ಕೊಡಗಿನ ರೈತರ ಹಾಗೂ ಮಲೆನಾಡಿನ ಜನರ ಸುದೀರ್ಘ ಹೋರಾಟಕ್ಕೆ ಸಿಕ್ಕ ದೊಡ್ಡ ಗೆಲುವಾಗಿದೆ.
ವಿಧಾನಸಭೆಯಲ್ಲಿ ಶ್ರೀ ಡಿ. ಕೆ. ಶಿವಕುಮಾರ್ ಅವರು ಈ ನಿರ್ಣಯವನ್ನು ಮಂಡಿಸಿದ್ದು, ಸದನದಲ್ಲಿದ್ದ ಎಲ್ಲಾ ಪಕ್ಷಗಳು ಒಂದೇ ಧ್ವನಿಯಲ್ಲಿ ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿವೆ.
ಸದನದಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು:
- ಕೇರಳ ಮಾದರಿಯಲ್ಲಿ ಸಮೀಕ್ಷೆ: ಕೇರಳ ಮಾದರಿಯಂತೆ ವರದಿ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಸಮೀಕ್ಷೆ ನಡೆಸುವುದು.
- ವಿಶೇಷ ಸಮಿತಿ ರಚನೆ: ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ರಚನೆ ಮಾಡುವುದು.
- ಕಾಲಾವಕಾಶ: ಸಮಗ್ರ ಪ್ರಕ್ರಿಯೆಗಾಗಿ ಕನಿಷ್ಠ ಒಂದು ವರ್ಷದ ಕಾಲಾವಕಾಶ ಪಡೆದುಕೊಳ್ಳುವುದು.
- ನ್ಯಾಯಾಂಗ ಹೋರಾಟ: ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಂಗ ಹೋರಾಟ ನಡೆಸುವುದು.
ಶಾಸಕ ಡಾ. ಮಂತರ್ ಗೌಡ ಹರ್ಷ
ಈ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, “ಮಡಿಕೇರಿ ಕ್ಷೇತ್ರದ ಶಾಸಕನಾಗಿ ಇಂದು ಹೆಮ್ಮೆಪಡುತ್ತೇನೆ. ನಮ್ಮೆಲ್ಲರ ಹೋರಾಟ ವ್ಯರ್ಥವಾಗಲಿಲ್ಲ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
