ಹಲಸೂರು: ರಾಜಧಾನಿ ಬೆಂಗಳೂರಿನ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಐಷಾರಾಮಿ ಕಾನ್ರಾಡ್ ಹೋಟೆಲ್‌ನ ಈಜುಕೊಳದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.

ಮೃತರನ್ನು ಜರ್ಮನಿ ಮೂಲದ ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೀಸ್ (57) ಹಾಗೂ ಸ್ಲೋವಾಕಿಯಾ ಮೂಲದ ಜುರಾಜ್ ಹೋರ್ವಾತ್ (45) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಅಮೆರಿಕದ ಪ್ರಜೆ ಹಾಗೂ ಹೋಟೆಲ್‌ನಲ್ಲಿ ಅತಿಥಿಯಾಗಿ ತಂಗಿದ್ದ ಮ್ಯಾಥ್ಯೂ ಡಿಸಾಂಟಿಸ್ (41) ಮತ್ತು ಈಜುಕೊಳದ ಸಿಬ್ಬಂದಿ ಹಾಗೂ ಜೀವರಕ್ಷಕನಾಗಿ ಕೆಲಸ ಮಾಡುತ್ತಿದ್ದ ರಾಹುಲ್ ತಿವಾರಿ (28) ಎಂದು ಗುರುತಿಸಲಾಗಿದೆ.

ಈಜುಕೊಳದಲ್ಲಿ ವಿದ್ಯುತ್ ಪ್ರವಹಿಸಿದ ಶಂಕೆ

ಹಲಸೂರಿನ ಕಾನ್ರಾಡ್ ಹೋಟೆಲ್‌ನ ಮೂರನೇ ಮಹಡಿಯಲ್ಲಿರುವ ಈಜುಕೊಳದ ಡೆಕ್‌ನಲ್ಲಿ ಈ ಘಟನೆ ಸಂಭವಿಸಿದೆ. ಶುಕ್ರವಾರ ಸಂಜೆ ಇಬ್ಬರು ವಿದೇಶಿ ಪ್ರಜೆಗಳು ಈಜುಕೊಳದಲ್ಲಿದ್ದಾಗ ವಿದ್ಯುತ್ ಪ್ರವಹಿಸಿ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.

ಇದನ್ನು ಗಮನಿಸಿದ ಮತ್ತಿಬ್ಬರು ಅವರನ್ನು ರಕ್ಷಿಸಲು ಮುಂದಾಗಿದ್ದು, ಈ ವೇಳೆ ಅವರಿಗೂ ವಿದ್ಯುತ್ ಆಘಾತ ತಗುಲಿ ಗಾಯಗಳಾಗಿವೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಘಟನೆಯ ಬಳಿಕ ನಾಲ್ವರನ್ನು ತಕ್ಷಣ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ಅಲೆಕ್ಸಾಂಡರ್ ಮೃತಪಟ್ಟಿದ್ದು, ಜುರಾಜ್ ಹೋರ್ವಾತ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡ ಮ್ಯಾಥ್ಯೂ ಡಿಸಾಂಟಿಸ್ ಹಾಗೂ ರಾಹುಲ್ ತಿವಾರಿ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗಿಗಳು

ಮೃತ ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೀಸ್ ಅವರು ಲುಫ್ತಾನ್ಸಾ ವಿಮಾನಯಾನ ಸಂಸ್ಥೆಯ ಉದ್ಯೋಗಿಯಾಗಿದ್ದರು. ಮತ್ತೊಬ್ಬ ಮೃತ ಜುರಾಜ್ ಹೋರ್ವಾತ್ ಅವರು ಐಬಿಎಂ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಜುರಾಜ್ ಅವರು ತಮ್ಮ ಕುಟುಂಬದೊಂದಿಗೆ ಹೋಟೆಲ್‌ಗೆ ಆಗಮಿಸಿ ತಂಗಿದ್ದರು. ಅಲೆಕ್ಸಾಂಡರ್ ಅವರು ಅಕ್ಟೋಬರ್ 20ರಂದು ಹೋಟೆಲ್‌ನಲ್ಲಿ ಚೆಕ್‌ಇನ್ ಆಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿದ್ಯುತ್ ಸುರಕ್ಷತಾ ವ್ಯವಸ್ಥೆ ಬಗ್ಗೆ ತನಿಖೆ

ಈಜುಕೊಳದಲ್ಲಿ ವಿದ್ಯುತ್ ದೋಷ ಉಂಟಾಗಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಜುಕೊಳದ ಸುತ್ತಮುತ್ತಲಿನ ವಿದ್ಯುತ್ ಸಂಪರ್ಕ ವ್ಯವಸ್ಥೆ, ಸುರಕ್ಷತಾ ಕ್ರಮಗಳು ಹಾಗೂ ನಿರ್ವಹಣೆಯಲ್ಲಿ ಲೋಪವಾಗಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.

ಘಟನೆಯ ಕುರಿತು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಾಥೆ ಮಾಹಿತಿ ನೀಡಿದ್ದು, ವಿದ್ಯುತ್ ಪ್ರವಹಿಸಲು ಕಾರಣವಾದ ಸನ್ನಿವೇಶಗಳು ಹಾಗೂ ಈಜುಕೊಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *