ಮಂಗಳೂರು : ಶಿಕ್ಷಣ, ಸಾಮಾಜಿಕ ಸೇವೆ ಹಾಗೂ ಮಾನವೀಯ ಕ್ಷೇತ್ರಗಳಲ್ಲಿ ಸಲ್ಲಿಸಿದ ವಿಶಿಷ್ಟ ಕೊಡುಗೆಗಳನ್ನು ಗುರುತಿಸಿ, ಕೇರಳದ ಕೋಝಿಕ್ಕೋಡ್‌ನ ಜಾಮಿಯಾ ಮರ್ಕಝ್ ಸಖಾಫತಿ ಸುನ್ನಿಯಾದ ಸ್ಥಾಪಕ ಹಾಗೂ ಕುಲಾಧಿಪತಿ ಶೈಖ್ ಅಬೂಬಕ್ಕರ್ ಅಹ್ಮದ್ ಕಾಂತಪುರಂ ಅವರಿಗೆ ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.

ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾಲಯದ ಯೆಂಡ್ಯೂರೆನ್ಸ್ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದ ಅಂಗವಾಗಿ ಈ ಗೌರವವನ್ನು ಘೋಷಿಸಲಾಗಿತ್ತು.

ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಕಾಂತಪುರಂ ಉಸ್ತಾದ್, ಮುಸ್ಲಿಮರು ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ಶಿಕ್ಷಣಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಸಮುದಾಯದ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

“ದೈವಾನುಗ್ರಹದಿಂದ ಹಲವು ವರ್ಷಗಳಿಂದ ಸಮಾಜಸೇವೆ ಮಾಡಲು ಸಾಧ್ಯವಾಗಿದೆ. ಅಲ್ಲಾಹನು ನೀಡಿದ ಅನುಗ್ರಹವೆಂದು ಭಾವಿಸಿ ಈ ಗೌರವ ಡಾಕ್ಟರೇಟ್ ಸ್ವೀಕರಿಸಿದ್ದೇನೆ. ಯೆನೆಪೋಯ ವಿಶ್ವವಿದ್ಯಾಲಯವೂ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡುತ್ತಿದೆ. ಮರ್ಕಝ್ ಸಂಸ್ಥೆಯ ಅನೇಕ ಅನಾಥ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಒದಗಿಸಿರುವುದು ಸಂತಸದ ವಿಚಾರ. ಮುಂದಿನ ದಿನಗಳಲ್ಲಿಯೂ ಅನಾಥರು ಹಾಗೂ ನಿರ್ಗತಿಕರಿಗೆ ಉಚಿತ ಶಿಕ್ಷಣ ನೀಡಲು ಸಾಧ್ಯವಾಗಲಿ ಎಂದು ಹಾರೈಸುತ್ತೇನೆ,” ಎಂದು ಅವರು ತಿಳಿಸಿದರು.

ಜಾಮಿಯಾ ಮರ್ಕಝ್‌ನ ಸಹಕುಲಾಧಿಪತಿ ಡಾ. ಚುಳ್ಳಿಕ್ಕೋಡ್ ಹುಸೈನ್ ಸಖಾಫಿ ಮಾತನಾಡಿ, ಕಾಂತಪುರಂ ಉಸ್ತಾದ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನವಾಗಿರುವುದು ಸುನ್ನಿ ಮುಸ್ಲಿಂ ಸಮುದಾಯದ ಬಹುಕಾಲದ ಕನಸು ನನಸಾದ ಕ್ಷಣವಾಗಿದೆ ಎಂದು ಹೇಳಿದರು. ಇದು ಅವರ ಶಿಷ್ಯರಷ್ಟೇ ಅಲ್ಲದೆ, ಸಾವಿರಾರು ಸಮುದಾಯದ ಸದಸ್ಯರಿಗೂ ಸಂತಸ ತಂದಿದೆ ಎಂದರು.

ಗೌರವ ಪದವಿಗಳಿಂದ ಉಸ್ತಾದರ ಸಮಾಜಸೇವೆ ಹಾಗೂ ಶಿಕ್ಷಣ ಕ್ಷೇತ್ರದ ಕಾರ್ಯಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಅವರ ಶಿಕ್ಷಣ ಕ್ರಾಂತಿ ಮತ್ತು ಸಾಮಾಜಿಕ ಸೇವೆ ನಿರಂತರವಾಗಿ ಮುಂದುವರಿಯಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾಂತಪುರಂ ಉಸ್ತಾದ್ ಅವರಿಗೆ ಗೌರವ ಪ್ರದಾನ ಮಾಡಿದ ಯೆನೆಪೋಯ ವಿಶ್ವವಿದ್ಯಾಲಯಕ್ಕೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ ಮಾತನಾಡಿ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಕಾಂತಪುರಂ ಉಸ್ತಾದ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಲಕ್ಷಾಂತರ ಜನರ ಗೌರವಕ್ಕೆ ಪಾತ್ರರಾಗಿರುವ ಕಾಂತಪುರಂ ಉಸ್ತಾದ್ ಅವರು ಸಮುದಾಯದ ಗಡಿಗಳನ್ನು ಮೀರಿ ಮನ್ನಣೆ ಗಳಿಸಿದ್ದಾರೆ. ಹಿಂದುಳಿದ ಹಾಗೂ ಅವಕಾಶವಂಚಿತ ವರ್ಗಗಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಸೇವೆ ಶ್ಲಾಘನೀಯವಾಗಿದೆ ಎಂದು ತಿಳಿಸಿದರು. ಕೇರಳದ ಕೋಝಿಕ್ಕೋಡ್‌ನ ಜಾಮಿಯಾ ಮರ್ಕಝ್ ಸಖಾಫತಿ ಸುನ್ನಿಯಾಗೆ ಸಂಬಂಧಿಸಿದ ಅವರ ನಾಯಕತ್ವ ಹಾಗೂ ಐತಿಹಾಸಿಕ ಉಳ್ಳಾಲ ದರ್ಗಾದ ಖಾಝಿಯಾಗಿ ಸಲ್ಲಿಸುತ್ತಿರುವ ಸೇವೆಯನ್ನೂ ಸ್ಮರಿಸಿದರು.

ತಮ್ಮ ತಂದೆ ದಿವಂಗತ ಯೆನೆಪೋಯ ಮೊಯ್ದಿನ್ ಕುಂಞಿ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡ ಅವರು, ಕಾಂತಪುರಂ ಉಸ್ತಾದರ ಆಶೀರ್ವಾದ ಮತ್ತು ಪ್ರೋತ್ಸಾಹ ಸಂಸ್ಥೆಯ ಬೆಳವಣಿಗೆಗೆ ಸದಾ ಬೆಂಬಲವಾಗಿ ನಿಂತಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಹಕುಲಾಧಿಪತಿಗಳಾದ ಡಾ. ವಿಜಯಕುಮಾರ್, ಕುಲಪತಿ ಡಾ. ಕೆ.ಎಸ್. ಗಂಗಾಧರ ಸೋಮಯಾಜಿ, ಕುಲಸಚಿವ ಡಾ. ಅಶ್ವಿನಿ ದತ್, ಡಾ. ಮುಹಮ್ಮದ್ ಫರ್ಹಾದ್, ಪರೀಕ್ಷಾಂಗ ಕುಲಸಚಿವ ಡಾ. ಬಿ.ಟಿ. ನಂದೀಶ್, ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್‌ನ ಟ್ರಸ್ಟಿ ಡಾ. ಹಬೀಬ್ ರಹ್ಮಾನ್ ಹಾಗೂ ಜಾಮಿಯಾ ಮರ್ಕಝ್‌ನ ಸಹಕುಲಾಧಿಪತಿ ಡಾ. ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಸೇರಿದಂತೆ ಹಲವು ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಯೆನೆಪೋಯ ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದ ಅಂಗವಾಗಿ ಕಾಂತಪುರಂ ಉಸ್ತಾದ್ ಹಾಗೂ ಎಸ್‌ಎಸ್ ಇನ್ನೋವೇಶನ್ಸ್ ಇಂಟರ್‌ನ್ಯಾಷನಲ್‌ನ ಸ್ಥಾಪಕ ಅಧ್ಯಕ್ಷ ಡಾ. ಸುಧೀರ್ ಶ್ರೀವಾಸ್ತವ ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿತ್ತು. ಅಕ್ಟೋಬರ್ 24ರಂದು ನಡೆದ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಬೇಕಿದ್ದ ಕಾಂತಪುರಂ ಉಸ್ತಾದ್ ಅವರು ಬುಧವಾರ ಆಯೋಜಿಸಲಾದ ವಿಶೇಷ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿದರು.

Leave a Reply

Your email address will not be published. Required fields are marked *