ಕಾಸರಗೋಡಿನಿಂದ ಆರಂಭಗೊಂಡ ಕರ್ನಾಟಕ ಕನ್ನಡ ಯಾತ್ರೆ

ಕಾಸರಗೋಡು: ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಕನ್ನಡ ಶಾಲೆಗಳ ಉಳಿವು ಮತ್ತು ಬೆಳವಣಿಗೆಯ ಸಂಕಲ್ಪದೊಂದಿಗೆ ‘ಕರ್ನಾಟಕ ಕನ್ನಡ ಯಾತ್ರೆ’ಗೆ ಕಾಸರಗೋಡು ಜಿಲ್ಲೆಯ ಬದಿಯಡ್ಕದ ತುಳು ಭವನದಲ್ಲಿ ಚಾಲನೆ ನೀಡಲಾಯಿತು.

ನಾಡೋಜ ಕಯ್ಯಾರ ಕಿಂಙ್ಙಣ್ಣ ರೈ ಅವರ ಪುತ್ರ ಶ್ರೀರಂಗನಾಥ ರೈ ಅವರು ದೀಪ ಬೆಳಗಿಸುವ ಮೂಲಕ ಯಾತ್ರೆಯನ್ನು ಉದ್ಘಾಟಿಸಿದರು. ಕನ್ನಡದ ನೆಲ, ನುಡಿ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಯಾತ್ರೆ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಕೇರಳ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಮಹಮ್ಮದ್ ಅಲಿ ಮಾತನಾಡಿ, ಉನೈಸ್ ಪೆರಾಜೆ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿದರು.

ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ ಅವರು ‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ದ ಅಧ್ಯಕ್ಷರಿಗೆ ಧ್ವಜ ಹಸ್ತಾಂತರಿಸಿದರು. ಶಾಮ್ ಆಳ್ವ ಕಡಾರು ಅವರು ಆಶಯ ವಿನಿಮಯ ಮಾಡಿದರು.

ಪತ್ರಕರ್ತ ಅಖಿಲೇಶ್ ನಗುಮುಗಂ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಭಿಷೇಕ್ ಭಟ್ ಕೋಳಿಕಜೆ ಅವರು ಪ್ರಾರ್ಥನೆ ನೆರವೇರಿಸಿದರು. ವಸಂತ ಬಾರಡ್ಕ (ಮೀಡಿಯಾ ಕ್ಲಾಸಿಕಲ್, ಕಾಸರಗೋಡು) ಹಾಗೂ ಸೂಶೀಲಾ ಬದಿಯಡ್ಕ ಅವರು ಕನ್ನಡ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ರಫೀಕ್ ಪಿ.ಯು., ಕಾದರ್ ಪಿ.ಕೆ., ಪುತ್ತೂರು ಸಂಘಟನಾ ಕಾರ್ಯದರ್ಶಿ ಶಿಹಾಬ್ ಗಾಳಿಮುಖ ಸೇರಿದಂತೆ ಹಲವಾರು ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬದಿಯಡ್ಕದ ಅನಂತ್ ಕುಮಾರ್ ಬರ್ಲಾ ಅವರು ಧನ್ಯವಾದ ಅರ್ಪಿಸಿದರು.

ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ, ಕರ್ನಾಟಕ ರಾಜ್ಯ ಇವರ ಆಶ್ರಯದಲ್ಲಿ ಯಾತ್ರೆ ಆಯೋಜಿಸಲಾಗಿದೆ.

ಕನ್ನಡ ಶಾಲೆಗಳು ಕೇವಲ ಶಿಕ್ಷಣದ ಕೇಂದ್ರಗಳಲ್ಲ; ಅವು ನಮ್ಮ ಭಾಷೆ, ಇತಿಹಾಸ, ಸಂಸ್ಕೃತಿ ಮತ್ತು ಮುಂದಿನ ಪೀಳಿಗೆಯ ಅಸ್ತಿತ್ವವನ್ನು ಕಾಪಾಡುವ ನೆಲೆಗಳು. ಈ ಯಾತ್ರೆಯ ಮೂಲಕ ಕನ್ನಡ ಶಾಲೆಗಳ ಸಂರಕ್ಷಣೆಯ ಅಗತ್ಯತೆ ಮತ್ತಷ್ಟು ಬಲವಾಗಿ ಮೊಳಗಲಿ ಎಂಬುದು ಕನ್ನಡಾಭಿಮಾನಿಗಳ ಆಶಯವಾಗಿದೆ.

Leave a Reply

Your email address will not be published. Required fields are marked *