ಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆಗಳನ್ನು ಸಹಿಸಲಾಗದು; ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಪ್ರತಾಪ್ ಸಿಂಹ ಅವರಿಗೆ ಆಗ್ರಹ
ಮಡಿಕೇರಿ: ಕೇರಳಿಗರು ಹಾಗೂ ಮಲಯಾಳಿಗಳ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ನೀಡಿರುವ ಹೇಳಿಕೆಗಳು ಖಂಡನೀಯವಾಗಿದ್ದು, ಇಂತಹ ಹೇಳಿಕೆಗಳು ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವಿನ ಸೌಹಾರ್ದಯುತ ಸಂಬಂಧಕ್ಕೆ ಧಕ್ಕೆ ತರುವಂತಿವೆ ಎಂದು ಕೆಪಿಸಿಸಿ ಸದಸ್ಯ ಕೆ.ಎ. ಯಾಕುಬ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.



ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೇರಳ ಕರ್ನಾಟಕದ ನೆರೆಯ ರಾಜ್ಯವಾಗಿದ್ದು, ತಲೆತಲಾಂತರಗಳಿಂದ ಎರಡೂ ರಾಜ್ಯಗಳ ಜನರು ಪರಸ್ಪರ ಸೌಹಾರ್ದತೆ ಹಾಗೂ ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಒಂದು ರಾಜ್ಯದ ಜನರು ಮತ್ತೊಂದು ರಾಜ್ಯಕ್ಕೆ ಉದ್ಯೋಗ ಹಾಗೂ ಉತ್ತಮ ಬದುಕಿನ ಹುಡುಕಾಟದಲ್ಲಿ ತೆರಳುವುದು ಸಹಜ ಪ್ರಕ್ರಿಯೆಯಾಗಿದೆ. ಅದರಂತೆ ಕೇರಳದ ಅನೇಕರು ಕೊಡಗು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಉದ್ಯೋಗ ಕಂಡುಕೊಂಡು, ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಇದರಿಂದ ಕರ್ನಾಟಕದ ಆರ್ಥಿಕ ಅಭಿವೃದ್ಧಿಗೂ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.



ಕೇರಳಿಗರಂತೆ ದೇಶದ ವಿವಿಧ ರಾಜ್ಯಗಳ ಜನರು ಕೂಡ ಕರ್ನಾಟಕದಲ್ಲಿ ನೆಲೆಸಿದ್ದು, ಇಲ್ಲಿನ ಸಂಸ್ಕೃತಿ, ಆಚಾರ-ವಿಚಾರ, ನೆಲ ಮತ್ತು ಜಲವನ್ನು ಗೌರವಿಸುತ್ತಿದ್ದಾರೆ. ಹೊರರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿರುವ ಜನರು ಕರ್ನಾಟಕದ ಸಾಮಾಜಿಕ ಹಾಗೂ ಆರ್ಥಿಕ ಬದುಕಿನೊಂದಿಗೆ ಬೆರೆತು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೇರಳಿಗರು ಹಾಗೂ ಮಲಯಾಳಿಗಳ ವಿರುದ್ಧ ಅಪಪ್ರಚಾರ ನಡೆಸುವುದು ಮತ್ತು ದ್ವೇಷದ ಭಾವನೆ ಮೂಡಿಸುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.



ಕೇರಳಿಗರು ಕರ್ನಾಟಕದ ಸಂಸ್ಕೃತಿಯನ್ನು ಗೌರವಿಸುವುದರ ಜೊತೆಗೆ ತಮ್ಮ ಮೂಲ ಮಲಯಾಳಿ ಸಂಸ್ಕೃತಿಯನ್ನೂ ಇಲ್ಲಿನ ಜನರೊಂದಿಗೆ ವಿನಿಮಯ ಮಾಡಿಕೊಂಡಿದ್ದಾರೆ. ಈ ರೀತಿಯ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯಿಂದ ದೇಶದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಚರಣೆಗಳು ಮತ್ತಷ್ಟು ಶ್ರೀಮಂತಗೊಂಡಿವೆ. ಪ್ರತಾಪ್ ಸಿಂಹ ಅವರು ಆರೋಪಿಸಿರುವಂತೆ ಮಲಯಾಳಿಗಳು ಇಲ್ಲಿನ ಸಂಸ್ಕೃತಿಯನ್ನು ಹಾಳು ಮಾಡಿಲ್ಲ ಎಂದು ಯಾಕುಬ್ ಸ್ಪಷ್ಟಪಡಿಸಿದ್ದಾರೆ.



ತೆಂಗಿನ ಮರವನ್ನು ಭಾರತೀಯರು ಕಲ್ಪವೃಕ್ಷವೆಂದು ಗೌರವಿಸುತ್ತಾರೆ. ಕೇರಳದಲ್ಲಿರುವ ತೆಂಗಿನ ಮರಗಳೂ ಕಲ್ಪವೃಕ್ಷಗಳೇ ಆಗಿವೆ. ಅಲ್ಲಿನ ನೀರು ಕೂಡ ಜೀವಜಲವೇ ಆಗಿದೆ. ಇಂತಹ ನೈಸರ್ಗಿಕ ಸಂಪತ್ತು ಹಾಗೂ ಜನರ ಬದುಕನ್ನು ಕೀಳಾಗಿ ಬಿಂಬಿಸುವ ರೀತಿಯ ಹೇಳಿಕೆಗಳು ಸಾರ್ವಜನಿಕ ಜೀವನದಲ್ಲಿರುವವರ ಘನತೆಗೆ ತಕ್ಕುದಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.



ಕೇರಳಿಗರ ಬುದ್ಧಿವಂತಿಕೆ ಮತ್ತು ಸಾಮರ್ಥ್ಯದ ಕುರಿತು ಪ್ರಶ್ನಿಸುವುದೂ ಸರಿಯಲ್ಲ. ವಿವಿಧ ಕ್ಷೇತ್ರಗಳಲ್ಲಿ ಮಲಯಾಳಿಗಳು ಸಾಧಿಸಿರುವ ಪ್ರಗತಿ, ವ್ಯಾಪಾರ ವಹಿವಾಟಿನ ವಿಸ್ತರಣೆ ಹಾಗೂ ಉದ್ಯಮಶೀಲತೆ ಅವರ ಪರಿಶ್ರಮ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಭಾರತೀಯರು ದೇಶದ ವಿವಿಧ ಭಾಗಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ನೆಲೆಸಿ ಉದ್ಯೋಗ, ವ್ಯಾಪಾರ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಇದು ಸಹಜ ಸಾಮಾಜಿಕ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.


ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಮಲಯಾಳಿ ಸಮುದಾಯದ ಮತಗಳನ್ನೂ ಪಡೆದಿರಲಿಲ್ಲವೇ? ಚುನಾವಣೆಯ ವೇಳೆ ಇದೇ ಸಮುದಾಯದ ಜನರ ಬಳಿ ಮತಯಾಚನೆ ಮಾಡಿರಲಿಲ್ಲವೇ? ಎಂದು ಕೆ.ಎ. ಯಾಕುಬ್ ಪ್ರಶ್ನಿಸಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯಗಳೇನೇ ಇದ್ದರೂ ಭಾಷೆ, ಪ್ರದೇಶ ಹಾಗೂ ಸಮುದಾಯದ ಆಧಾರದಲ್ಲಿ ಜನರನ್ನು ಅವಹೇಳನ ಮಾಡುವುದು ಸರಿಯಾದ ಬೆಳವಣಿಗೆಯಲ್ಲ. ಕರ್ನಾಟಕ ಮತ್ತು ಕೇರಳದ ಜನರ ನಡುವಿನ ಸೌಹಾರ್ದಯುತ ಸಂಬಂಧವನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಕೇರಳಿಗರು ಹಾಗೂ ಮಲಯಾಳಿಗಳು ಕರ್ನಾಟಕದ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಗೌರವಿಸಬೇಕು ಎಂದು ಅವರು ತಿಳಿಸಿದ್ದಾರೆ.
ಕೇರಳಿಗರು ಹಾಗೂ ಮಲಯಾಳಿಗಳ ಕುರಿತು ನೀಡಿರುವ ಹೇಳಿಕೆಗಳ ಬಗ್ಗೆ ಪ್ರತಾಪ್ ಸಿಂಹ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸುವುದರ ಜೊತೆಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಕೆಪಿಸಿಸಿ ಸದಸ್ಯ ಕೆ.ಎ. ಯಾಕುಬ್ ಒತ್ತಾಯಿಸಿದ್ದಾರೆ.




