ಕಾಸರಗೋಡು: ಕನ್ನಡ ಶಾಲೆಗಳ ಉಳಿವು ಹಾಗೂ ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ದ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ಅವರಿಗೆ ‘ಕನ್ನಡ ಪಯಸ್ವಿನಿ ಅಚೀವ್‌ಮೆಂಟ್ ಅವಾರ್ಡ್’ ನೀಡಿ ಗೌರವಿಸಲಾಗಿದೆ.
ಕನ್ನಡ ಶಾಲೆಗಳ ಸಂರಕ್ಷಣೆ, ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಗಡಿನಾಡಿನಲ್ಲಿ ಕನ್ನಡದ ಅಸ್ಮಿತೆಯನ್ನು ಉಳಿಸುವ ನಿಟ್ಟಿನಲ್ಲಿ ಅವರು ನಡೆಸುತ್ತಿರುವ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಗಡಿನಾಡ ಕನ್ನಡಿಗರ ಸ್ನೇಹ ಸಂಗಮ ಕಾರ್ಯಕ್ರಮ
ಕನ್ನಡ ಶಾಲೆ ಉಳಿಸಿ-ಬೆಳೆಸಿ ಅಭಿಯಾನದ ವತಿಯಿಂದ ಹಮ್ಮಿಕೊಂಡಿರುವ ಕನ್ನಡ ಯಾತ್ರೆಯ ಅಂಗವಾಗಿ ಕಾಸರಗೋಡಿನ ಕನ್ನಡ ಭವನದಲ್ಲಿ ‘ಗಡಿನಾಡ ಕನ್ನಡಿಗರ ಸ್ನೇಹ ಸಂಗಮ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ವೆಂಕಟ್ರಮಣ ಹೊಳ್ಳ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ಅವರು ಕನ್ನಡ ಯಾತ್ರೆಯ ಉದ್ದೇಶ, ಅದರ ಮಹತ್ವ ಹಾಗೂ ಗಡಿನಾಡಿನ ಕನ್ನಡ ಶಾಲೆಗಳ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡಿದರು.
ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಕನ್ನಡ ಭವನದ ವಾಮನ್ ರಾವ್ ಬೇಕಲ್, ಈಶ್ವರ್ ಮಾಸ್ಟರ್, ವಿಜಿ ಕಾಸರಗೋಡು, ಅಖಿಲೇಶ್ ನಗುಮುಗಂ, ಸಂಧ್ಯಾರಾಣಿ, ವಸಂತ ಭಾರಡ್ಕ, ಶಿಹಾಬ್ ಗಾಳಿಮುಖ, ಪೆರ್ವಾಡ್ ಹಾಗೂ ವಸಂತ ಕೆರೆಮನೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಗಡಿನಾಡಿನ ಕನ್ನಡಿಗರನ್ನು ಒಗ್ಗೂಡಿಸುವುದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಒತ್ತು ನೀಡುವುದು ಹಾಗೂ ಕನ್ನಡ ಶಾಲೆಗಳ ಉಳಿವಿಗಾಗಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸ್ನೇಹ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನ್ನಡ ಶಾಲೆಗಳ ಉಳಿವಿಗಾಗಿ ನಡೆಯುತ್ತಿರುವ ಅಭಿಯಾನಕ್ಕೆ ಈ ಗೌರವ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಿದೆ.
