ವಾಹನ ಸವಾರರಿಗೆ ಅಪಘಾತದ ಭೀತಿ; ನಿಯಮ ಉಲ್ಲಂಘಿಸುವ ಟಿಪ್ಪರ್‌ಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹ

ಕುಶಾಲನಗರ: ಪಟ್ಟಣದ ಹಾಸನ–ಮಾಕುಟ್ಟ ರಾಷ್ಟ್ರೀಯ ಹೆದ್ದಾರಿಯ ವಿಶಾಲ್ ಮಾರ್ಟ್ ಮುಂಭಾಗದಲ್ಲಿ ಕಲ್ಲು ಮತ್ತು ಜಲ್ಲಿ ಪುಡಿ ಸಾಗಿಸುವ ಟಿಪ್ಪರ್ ವಾಹನಗಳಿಂದ ರಸ್ತೆಯ ಮೇಲೆ ಕಲ್ಲಿನ ಚೂರುಗಳು ಚೆಲ್ಲಾಪಿಲ್ಲಿಯಾಗಿ ಬೀಳುತ್ತಿದ್ದು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಟಿಪ್ಪರ್‌ಗಳಲ್ಲಿ ಯಾವುದೇ ಮುಚ್ಚಳ ಅಥವಾ ಸುರಕ್ಷತಾ ಹೊದಿಕೆ ಅಳವಡಿಸದೆ ಕಲ್ಲು ಹಾಗೂ ಜಲ್ಲಿ ಪುಡಿಯನ್ನು ಸಾಗಿಸುತ್ತಿರುವುದರಿಂದ ರಸ್ತೆಯುದ್ದಕ್ಕೂ ಕಲ್ಲಿನ ಚೂರುಗಳು ಬಿದ್ದಿವೆ. ಇದರಿಂದ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಹರಸಾಹಸ ಪಡುತ್ತಿದ್ದು, ಸಣ್ಣ ಅಜಾಗರೂಕತೆಯಿಂದಲೂ ಅಪಘಾತ ಸಂಭವಿಸುವ ಆತಂಕ ಎದುರಾಗಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಗಳು ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಟಿಪ್ಪರ್‌ಗಳಲ್ಲಿ ಸರಕು ಸಾಗಣೆ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಲಿ

ಸಂಬಂಧಪಟ್ಟ ಅಧಿಕಾರಿಗಳು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸಿ ಸರಕು ಸಾಗಣೆ ಮಾಡುತ್ತಿರುವ ಟಿಪ್ಪರ್ ವಾಹನಗಳನ್ನು ಗುರುತಿಸಬೇಕು. ಅಂತಹ ವಾಹನಗಳ ಮಾಲೀಕರು ಹಾಗೂ ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಲ್ಲದೆ, ರಸ್ತೆಯಲ್ಲಿ ಬಿದ್ದಿರುವ ಕಲ್ಲು ಮತ್ತು ಜಲ್ಲಿ ಪುಡಿಯನ್ನು ತಕ್ಷಣ ತೆರವುಗೊಳಿಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ವಾಹನ ಸವಾರರು ಹಾಗೂ ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಗಮನಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *