ಒಂದು ವಾರದೊಳಗೆ ದುರಸ್ತಿ ಮಾಡುವುದಾಗಿ ಅಧಿಕಾರಿಗಳ ಭರವಸೆ; ತಪ್ಪಿದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ

ಕುಶಾಲನಗರ: ಪಟ್ಟಣದ ಪುರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಬಹುದಿನಗಳಿಂದ ಬೃಹತ್ ಹೊಂಡವೊಂದು ನಿರ್ಮಾಣವಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹೊಂಡದಿಂದಾಗಿ ಅಪಘಾತದ ಭೀತಿಯೂ ಎದುರಾಗಿದ್ದು, ತಕ್ಷಣ ದುರಸ್ತಿಗೊಳಿಸುವಂತೆ ಎಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕೆಲವು ದಿನಗಳ ಹಿಂದೆ ಸಾರ್ವಜನಿಕರೊಬ್ಬರು ಈ ಹೊಂಡಕ್ಕೆ ಬಿದ್ದು ಗಾಯಗೊಂಡ ಘಟನೆ ನಡೆದಿತ್ತು. ತಕ್ಷಣ ಸ್ಥಳೀಯ ಆಟೋ ಚಾಲಕರು ನೆರವಿಗೆ ಧಾವಿಸಿ, ಆಂಬ್ಯುಲೆನ್ಸ್ ಮೂಲಕ ಗಾಯಾಳುವನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.

ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಎಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಇಂದು ಪುರಸಭೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಒಂದು ವಾರದೊಳಗೆ ಹೊಂಡವನ್ನು ಮುಚ್ಚಿಸಿ ರಸ್ತೆ ದುರಸ್ತಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ.

ವಾರದೊಳಗೆ ದುರಸ್ತಿಯಾಗದಿದ್ದರೆ ಉಗ್ರ ಪ್ರತಿಭಟನೆ

ಪುರಸಭೆ ಅಧಿಕಾರಿಗಳು ನೀಡಿರುವ ಭರವಸೆಯಂತೆ ಒಂದು ವಾರದೊಳಗೆ ಹೊಂಡವನ್ನು ಮುಚ್ಚಿಸಿ ರಸ್ತೆ ದುರಸ್ತಿಗೊಳಿಸದಿದ್ದರೆ ಪುರಸಭೆ ಕಚೇರಿ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕೆ. ಚಂದ್ರು, ಜಿಲ್ಲಾ ಗೌರವಾಧ್ಯಕ್ಷ ನಾಗರಾಜ್ ಕಾವಲ್, ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ, ತಾಲೂಕು ಗೌರವಾಧ್ಯಕ್ಷೆ ಪುಟ್ಟಮ್ಮ, ತಾಲೂಕು ಉಪಾಧ್ಯಕ್ಷ ರಂಗಸ್ವಾಮಿ, ತಾಲೂಕು ಕಾರ್ಯದರ್ಶಿ ಶ್ರೀಧರ್ ಶೆಟ್ಟಿ, ವಿಧಾನಸಭಾ ಕ್ಷೇತ್ರದ ಸಲಹೆಗಾರ ಹಬಸಪ್ಪ ಹಾಗೂ ಪದಾಧಿಕಾರಿಗಳಾದ ಕಾರ್ತಿಕ್, ರಮೇಶ್ ಅವರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *