ಮಂಗಳೂರು: ಚಿನ್ನದ ಬೆಲೆ ಇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ಹೇಳಿಕೊಳ್ಳುವ ಬಿಜೆಪಿ ನಾಯಕರು, ಚಿನ್ನದ ಬೆಲೆ ಗಗನಕ್ಕೇರಿದಾಗ ಅದರ ಹೊಣೆಗಾರಿಕೆಯನ್ನು ಏಕೆ ಪ್ರಧಾನಿಯವರ ಮೇಲೆ ಹೊರಿಸುವುದಿಲ್ಲ ಎಂದು ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಪ್ರಶ್ನಿಸಿದ್ದಾರೆ.

2014ರಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ₹2,349ರಷ್ಟಿತ್ತು. ಇತ್ತೀಚಿನವರೆಗೂ ಅದು ₹16,000ರ ಗಡಿ ತಲುಪುವವರೆಗೆ ಏರಿಕೆಯಾಗಿದ್ದರೂ, ಆಗ ಪ್ರಧಾನಿ ಮೋದಿ ಅವರು ಚಿನ್ನ ಖರೀದಿಸಬೇಡಿ ಎಂದು ಜನರಿಗೆ ಏಕೆ ಕರೆ ನೀಡಲಿಲ್ಲ? ದೇಶದ ಖಜಾನೆ ತುಂಬಲಿ ಎಂಬ ಉದ್ದೇಶದಿಂದ ಅಂದು ಮೌನವಾಗಿದ್ದರೇ ಎಂದು ಜನರು ಪ್ರಶ್ನಿಸುವುದರಲ್ಲಿ ತಪ್ಪೇನಿಲ್ಲ ಎಂದು ಅವರು ಹೇಳಿದ್ದಾರೆ.

ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದಂತೆ ಮೋದಿಯವರು ಹಾಗೂ ಅವರ ಪಕ್ಷದ ನಾಯಕರು, ತಮ್ಮಿಂದಲೇ ಬೆಲೆ ಇಳಿಕೆಯಾಗಿದೆ ಎಂಬ ರೀತಿಯಲ್ಲಿ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ವ್ಯಾಪಾರಿಗಳು ಸೇರಿದಂತೆ ಸಾಕಷ್ಟು ಜನರಿಗೆ ಲಾಭವಾಗಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಇಂದು ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಇದಕ್ಕೂ ವಿರೋಧ ಪಕ್ಷದವರೇ ಕಾರಣ ಎಂದು ಆಡಳಿತ ಪಕ್ಷದವರು ಹೇಳಿದರೂ ಆಶ್ಚರ್ಯವಿಲ್ಲ ಎಂದು ವೆಂಕಪ್ಪ ಗೌಡ ವ್ಯಂಗ್ಯವಾಡಿದ್ದಾರೆ.

ಚಿನ್ನದ ಬೆಲೆ ಏರಿಕೆಯಾದಾಗ ಅದರ ಹೊಣೆಗಾರಿಕೆಯಿಂದ ನುಣುಚಿಕೊಂಡು, ಬೆಲೆ ಇಳಿಕೆಯಾದಾಗ ಮಾತ್ರ ಅದರ ಶ್ರೇಯಸ್ಸನ್ನು ಪಡೆದುಕೊಳ್ಳಲು ಮುಂದಾಗುವುದು ಸರಿಯಾದ ರಾಜಕೀಯ ನಡೆ ಅಲ್ಲ. ಇಂತಹ ಕೀಳುಮಟ್ಟದ ಪ್ರಚಾರ ತಂತ್ರಗಳು ಕೇಂದ್ರ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಅವರು ಟೀಕಿಸಿದ್ದಾರೆ.

Leave a Reply

Your email address will not be published. Required fields are marked *