ಕೊಂಡಂಗೇರಿ, ಹಾಲುಗುಂದ, ಎಲಿಯಂಗಾಡು ಭಾಗದಲ್ಲಿ ಮುಂದುವರಿದ ಹುಲಿ ಹಾವಳಿ – ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಶಾಸಕ ಪೊನ್ನಣ್ಣ ಸೂಚನೆಯಂತೆ ಅರಣ್ಯ ಇಲಾಖೆಯಿಂದ ಬೋನ್ ಅಳವಡಿಕೆ

ಕೊಡಗು: ಜಿಲ್ಲೆಯ ಕೊಂಡಗೇರಿ, ಹಾಲುಗುಂದ ಹಾಗೂ ಎಲಿಯಂಗಾಡು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿ ದಾಳಿ ಮುಂದುವರಿದಿದ್ದು, ಕಳೆದ ಎರಡು ದಿನಗಳಲ್ಲಿ ಮತ್ತೆ ಎರಡು ಹಸುಗಳು ಹುಲಿಗೆ ಬಲಿಯಾಗಿವೆ. ನಿರಂತರವಾಗಿ ನಡೆಯುತ್ತಿರುವ ದಾಳಿಗಳಿಂದಾಗಿ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಈ ಭಾಗದಲ್ಲಿ ಹುಲಿ ಹಾವಳಿ ಹೆಚ್ಚಾಗಿದ್ದು, ಜಾನುವಾರುಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಶಾಸಕ ಪೊನ್ನಣ್ಣ ಅವರು ನವೆಂಬರ್ 22ರಂದು ಗ್ರಾಮಕ್ಕೆ ಭೇಟಿ ನೀಡಿ, ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಜನಸಂಪರ್ಕ ಸಭೆ ನಡೆಸಿದ್ದರು. ಸಭೆಯಲ್ಲಿ ಹುಲಿಯನ್ನು ಸೆರೆಹಿಡಿಯಲು ಬೋನ್ ಅಳವಡಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಶಾಸಕರ ಸೂಚನೆಯ ಮೇರೆಗೆ ನವೆಂಬರ್ 22ರಂದು ಎಲಿಯಂಗಾಡು ಬಳಿ ಅರಣ್ಯ ಇಲಾಖೆಯಿಂದ ಬೋನ್ ಅಳವಡಿಸಲಾಗಿತ್ತು. ಆದರೆ, ಹುಲಿ ಮಾತ್ರ ಬೋನಿನತ್ತ ಸುಳಿಯದಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಇದರ ನಡುವೆಯೇ ನವೆಂಬರ್ 22ರಂದು ನದಿಯ ಬಳಿ ಮೇಯಲು ಬಿಟ್ಟಿದ್ದ ಪೂರ್ಣ ಎಂಬುವವರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದಿದೆ. ಮತ್ತೊಂದೆಡೆ, ನವೆಂಬರ್ 23ರಂದು ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಕೇರಿ ಗ್ರಾಮದ ಗಣಪತಿ ಎಂಬುವವರು ತಮ್ಮ ಹೊಲದಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೂ ಹುಲಿ ದಾಳಿ ನಡೆಸಿ ಕೊಂದಿದೆ.

ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

ನಿರಂತರವಾಗಿ ಹುಲಿ ದಾಳಿಗಳು ನಡೆಯುತ್ತಿದ್ದರೂ, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅಸಮಾಧಾನ ಗ್ರಾಮಸ್ಥರಿಂದ ವ್ಯಕ್ತವಾಗಿದೆ. ಹುಲಿ ದಾಳಿ ನಡೆದ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪಟಾಕಿ ಸಿಡಿಸಿ ತೆರಳುತ್ತಾರೆ. ಆದರೆ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಹುಲಿಯನ್ನು ಸೆರೆಹಿಡಿಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಜಾನುವಾರುಗಳ ರಕ್ಷಣೆಗೆ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *