ಟೋಲ್ ಗೇಟ್ ಬಳಿಯ ಪ್ರತಿಭಟನೆಗಳಿಂದ ಸಂಚಾರಕ್ಕೆ ತೊಂದರೆ; ಜಿಲ್ಲಾಧಿಕಾರಿಯಿಂದ ಆದೇಶ ಜಾರಿ

ಮಡಿಕೇರಿ: ಮಡಿಕೇರಿ ಟೋಲ್ ಗೇಟ್ ಬಳಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಕೊಡಗು ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿ ಸೋಮಶೇಖರ್ ಅವರು ಆದೇಶ ಹೊರಡಿಸಿದ್ದು, ಮುಂದಿನ ಆದೇಶದವರೆಗೆ ವೃತ್ತದಲ್ಲಿ ಯಾವುದೇ ರೀತಿಯ ಪ್ರತಿಭಟನಾ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.

ಪೊಲೀಸ್ ಇಲಾಖೆಯ ಕೋರಿಕೆಯ ಮೇರೆಗೆ ಜಿಲ್ಲಾಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ಮಡಿಕೇರಿ ನಗರಕ್ಕೆ ಪ್ರವೇಶಿಸುವ ಹಾಗೂ ನಗರದಿಂದ ಹೊರಹೋಗುವ ಪ್ರಮುಖ ಮಾರ್ಗವಾಗಿರುವ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆಗಳು ನಡೆಯುವುದರಿಂದ ಜನಸಂಚಾರ ಮತ್ತು ವಾಹನಗಳ ಸಂಚಾರವನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ಧರಣಿ, ಉಪವಾಸ ಸತ್ಯಾಗ್ರಹಕ್ಕೂ ಅವಕಾಶವಿಲ್ಲ

ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ, ಮುಂದಿನ ಆದೇಶ ಹೊರಡಿಸುವವರೆಗೆ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ, ಧರಣಿ, ಉಪವಾಸ ಸತ್ಯಾಗ್ರಹ ಹಾಗೂ ಮಾನವ ಸರಪಳಿ ನಿರ್ಮಿಸುವುದನ್ನು ನಿರ್ಬಂಧಿಸಲಾಗಿದೆ.

ನಗರದ ಪ್ರಮುಖ ವೃತ್ತದಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸುವುದು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದು ಈ ಆದೇಶದ ಉದ್ದೇಶವಾಗಿದೆ.

Leave a Reply

Your email address will not be published. Required fields are marked *