ಸುಳ್ಯ ತಾಲೂಕು ಸಮಿತಿ ಅಧ್ಯಕ್ಷರಾಗಿ ವಿನಯ ಸಂಕೇಶ್ ಆಯ್ಕೆ
ಸುಳ್ಯ: ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಕೊಡಗು ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಪತ್ರಕರ್ತ ಹಸೈನಾರ್ ಜಯನಗರ ಅವರನ್ನು ರಾಜ್ಯ ಸಮಿತಿಯು ನೇಮಕ ಮಾಡಿದೆ. ಈ ಹಿಂದೆ ಸುಳ್ಯ ತಾಲೂಕು ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಹಸೈನಾರ್ ಜಯನಗರ ಅವರಿಗೆ ಇದೀಗ ಕೊಡಗು ಜಿಲ್ಲಾ ಸಮಿತಿಯ ಜವಾಬ್ದಾರಿ ವಹಿಸಲಾಗಿದೆ.
ಹಸೈನಾರ್ ಜಯನಗರ ಅವರು ಸುಳ್ಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಶಾಲಾ ಅಭಿವೃದ್ಧಿ ಸಮಿತಿ (SDMC) ಉಪಾಧ್ಯಕ್ಷರಾಗಿ, ಸುಳ್ಯ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾಗಿ, ಸುಳ್ಯ ತಾಲೂಕು ಪ್ರೆಸ್ ಕ್ಲಬ್‌ನ ಜತೆ ಕಾರ್ಯದರ್ಶಿಯಾಗಿ ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.


ಸುಳ್ಯ ತಾಲೂಕು ಸಮಿತಿ ಅಧ್ಯಕ್ಷರಾಗಿ ವಿನಯ ಸಂಕೇಶ್
ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಸುಳ್ಯ ತಾಲೂಕು ಸಮಿತಿಯ ನೂತನ ಅಧ್ಯಕ್ಷರಾಗಿ ವಿನಯ ಸಂಕೇಶ್ ಚೊಕ್ಕಾಡಿ ಅವರನ್ನು ಆಯ್ಕೆ ಮಾಡಲಾಗಿದೆ.
ವಿನಯ ಸಂಕೇಶ್ ಅವರು ಕುಕ್ಕುಜಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿ (SDMC) ಅಧ್ಯಕ್ಷರಾಗಿ, ಫ್ರೆಂಡ್ಸ್ ಸಂಕೇಶ್ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ ಹಾಗೂ ಕುಕ್ಕುಜಡ್ಕ ಶ್ರೀ ಗಣೇಶೋತ್ಸವ ಸಮಿತಿಯ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.


ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ರಾಜ್ಯಾದ್ಯಂತ ಕನ್ನಡ ಯಾತ್ರೆ
ಅಭಿಯಾನದ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ಅವರ ನೇತೃತ್ವದಲ್ಲಿ ಕಳೆದ 65 ದಿನಗಳಿಂದ ರಾಜ್ಯಾದ್ಯಂತ ಕನ್ನಡ ಯಾತ್ರೆ ನಡೆಯುತ್ತಿದ್ದು, ಇದರ ಭಾಗವಾಗಿ ನೂರಾರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಾನಿಗಳ ಸಹಕಾರದೊಂದಿಗೆ ಸರ್ಕಾರಿ ಶಾಲೆಗಳಿಗೆ ಜಾರುಬಂಡಿ ಸೇರಿದಂತೆ ಆಟದ ಪರಿಕರಗಳ ವಿತರಣೆ, ಶಾಲೆಗಳಿಗೆ ಬಣ್ಣ ಬಳಿಸುವುದು, ಉಚಿತ ಕಂಪ್ಯೂಟರ್‌ಗಳ ಕೊಡುಗೆ, ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳ ವಿತರಣೆ, ಡ್ರಾಯಿಂಗ್ ಬೋರ್ಡ್‌ಗಳ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಅಭಿಯಾನ ಕೈಗೊಳ್ಳುತ್ತಿದೆ.


ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಅಭಿಯಾನವು, ಮುಂದಿನ ದಿನಗಳಲ್ಲಿಯೂ ರಾಜ್ಯದ ವಿವಿಧ ಭಾಗಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವ ಗುರಿ ಹೊಂದಿದೆ.
ನೂತನವಾಗಿ ನೇಮಕಗೊಂಡಿರುವ ಹಸೈನಾರ್ ಜಯನಗರ ಹಾಗೂ ವಿನಯ ಸಂಕೇಶ್ ಅವರಿಗೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಶಿಕ್ಷಣಾಭಿಮಾನಿಗಳು ಶುಭ ಹಾರೈಸಿದ್ದಾರೆ.





