ಕತ್ತಿಯಿಂದ ಎದೆಗೆ ಇರಿತ – ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು

ಬಂಟ್ವಾಳ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬರು ಕೊಲೆಯಾದ ಘಟನೆ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಶಿರಂಕಲ್ಲು ನಂದರಬೆಟ್ಟು ಎಂಬಲ್ಲಿ ನವೆಂಬರ್ 24ರ ರಾತ್ರಿ ನಡೆದಿದೆ.

ಕನ್ಯಾನ ಗ್ರಾಮದ ಶಿರಂಕಲ್ಲು ನಿವಾಸಿ ಚೆನ್ನಯ್ಯ ಪೂಜಾರಿ (52) ಕೊಲೆಯಾದ ವ್ಯಕ್ತಿ. ಅವರ ಸಹೋದರ ಕೋಟಿ ಪೂಜಾರಿ ಅವರ ಪುತ್ರಿ ಕೃತಿಕಾ (26) ಕೊಲೆ ಕೃತ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ.

ಶಿರಂಕಲ್ಲು ನಂದರಬೆಟ್ಟು ದಾಸರಕೋಡಿ ಪ್ರದೇಶದಲ್ಲಿ ಅವಳಿ ಸಹೋದರರಾದ ಕೋಟಿ ಪೂಜಾರಿ ಹಾಗೂ ಚೆನ್ನಯ್ಯ ಪೂಜಾರಿ ವಾಸವಾಗಿದ್ದರು. ಕೋಟಿ ಪೂಜಾರಿ ಅವರ ವಿವಾಹಿತ ಪುತ್ರಿ ಕೃತಿಕಾ ಇತ್ತೀಚೆಗೆ ತವರು ಮನೆಗೆ ಬಂದಿದ್ದರು ಎನ್ನಲಾಗಿದೆ.

ನವೆಂಬರ್ 24ರಂದು ರಾತ್ರಿ ಸುಮಾರು 7 ಗಂಟೆಯ ವೇಳೆಗೆ ಚೆನ್ನಯ್ಯ ಪೂಜಾರಿ ಅವರು ಕೃತಿಕಾ ವಾಸವಿದ್ದ ಮನೆಯ ಬಳಿ ಬಂದು ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಮಾತಿನ ಚಕಮಕಿ ಆರಂಭವಾಗಿ, ಅದು ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಕೃತಿಕಾ ಮನೆಯಲ್ಲಿದ್ದ ಕತ್ತಿಯಿಂದ ಚಿಕ್ಕಪ್ಪ ಚೆನ್ನಯ್ಯ ಪೂಜಾರಿ ಅವರ ಎದೆಗೆ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ.

ಕತ್ತಿಯೇಟಿನಿಂದ ಎದೆಗೆ ಗಂಭೀರ ಗಾಯಗೊಂಡು ರಕ್ತಸ್ರಾವದಿಂದ ನರಳಾಡುತ್ತಿದ್ದ ಚೆನ್ನಯ್ಯ ಪೂಜಾರಿ ಅವರನ್ನು ಸ್ಥಳೀಯರು ತಕ್ಷಣ ವಿಟ್ಲ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಮಾರ್ಗಮಧ್ಯೆಯೇ ತೀವ್ರ ರಕ್ತಸ್ರಾವದಿಂದ ಅವರು ಕೊನೆಯುಸಿರೆಳೆದಿದ್ದಾರೆ.

ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ, ಉಪನಿರೀಕ್ಷಕರು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಪೊಲೀಸರು ಆರೋಪಿ ಕೃತಿಕಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *