ಬೃಹತ್ ರಕ್ತದಾನ ಶಿಬಿರ, ರಕ್ತದಾನಿಗಳಿಗೆ ಸನ್ಮಾನ
ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ನವಂಬರ್ 25ರಂದು ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ರಕ್ತದಾನಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಹಾಗೂ ರಕ್ತನಿಧಿ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ರಕ್ತದಾನವು ಶ್ರೇಷ್ಠ ಮಾನವೀಯ ಸೇವೆಯಾಗಿದ್ದು, ರಕ್ತಕ್ಕೆ ಜಾತಿ, ಧರ್ಮದ ಭೇದವಿಲ್ಲ. ಎಲ್ಲರ ರಕ್ತವೂ ಒಂದೇ. ಜಾತಿ, ಧರ್ಮವನ್ನು ಮೀರಿ ಮಾನವೀಯತೆಯ ದೃಷ್ಟಿಯಿಂದ ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು. ಯುವ ಸಮುದಾಯವು ರಕ್ತದಾನ ಶಿಬಿರಗಳಲ್ಲಿ ಹೆಚ್ಚಾಗಿ ಭಾಗವಹಿಸಿ ರಕ್ತದಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಕೆ.ವಿ.ಜಿ. ವೈದ್ಯಕೀಯ ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಆಶಾ ಅಭಿಕಾರ್, ರೋಗಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸತ್ಯವತಿ ಆರ್. ಆಳ್ವ, ರಕ್ತನಿಧಿ ಕೇಂದ್ರದ ಅಧಿಕಾರಿ ಡಾ. ನವ್ಯ ಬಿ.ಎನ್. ಹಾಗೂ ಡಾ. ಅಂಜಲಿ ರಾವ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 168ಕ್ಕೂ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಮಹಾ ರಕ್ತ ದಾನಿಗಳಾದ ಭಾರತೀಯರ ಸಂಸ್ಥೆಯ ಸುಳ್ಯ ಘಟಕದ ಸಭಾಪತಿ ಪಿ.ಬಿ. ಸುಧಾಕರ್ ರೈ, ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಧ್ಯಾಪಕ ಡಾ. ಲಕ್ಷ್ಮೀಶ ಕೆ.ಎಸ್., ಎಂ. ಸೂರ್ಯನಾರಾಯಣ ಪ್ರಭು, ಶರೀಫ್, ನಾರಾಯಣ್ ಎಸ್.ಎನ್., ಸಿದ್ದಿಕ್ ಗೂನಡ್ಕ, ನವೀನ್ ಎಲಿಮಲೆ, ಪ್ರಕಾಶ್ ಯಾದವ್, ಶರತ್ ಕುಮಾರ್ ಬಿ.ಎಸ್. ಹಾಗೂ ರಶ್ಮಿ ಡಿ. ಅವರನ್ನು ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯರವರ ನೇತೃತ್ವದಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ರಕ್ಷಿತ್ ವಂದೇ ಮಾತರಂ ಹಾಡಿದರು. ಡಾ. ಶ್ರೀವತ್ಸ ಪ್ರಾರ್ಥಿಸಿದರು. ಡಾ. ಸತ್ಯವತಿ ಆರ್. ಆಳ್ವ ಸ್ವಾಗತಿಸಿದರು. ಡಾ. ನವ್ಯ ಬಿ.ಎನ್. ಪ್ರತಿಜ್ಞಾವಿಧಿ ಬೋಧಿಸಿದರು. ಡಾ. ಅಂಜಲಿ ರಾವ್ ವಂದಿಸಿದರು. ತೀರ್ಥೇಶ್ ಪಾರೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಹ ಸಂಸ್ಥೆಗಳ ಪ್ರಾಂಶುಪಾಲರು, ವಿಭಾಗಗಳ ಮುಖ್ಯಸ್ಥರು, ರಕ್ತದಾನಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶಿಬಿರದಲ್ಲಿ ಒಟ್ಟು 80 ಮಂದಿ ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.










