ರಸ್ತೆ ಮರುಡಾಮರೀಕರಣ ಹಾಗೂ ಅಭಿವೃದ್ಧಿಗೆ ಆಗ್ರಹಿಸಿ ಹಿತರಕ್ಷಣಾ ವೇದಿಕೆ ಹೋರಾಟ
ಒಂದು ತಿಂಗಳ ಗಡುವು; ಸ್ಪಂದಿಸದಿದ್ದರೆ ಪೆರಾಜೆಯಿಂದ ಮಡಿಕೇರಿವರೆಗೆ ಪಾದಯಾತ್ರೆ
ಸುಳ್ಯ: ಪೆರಾಜೆ ಗ್ರಾಮದ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ದುಸ್ತರವಾಗಿದ್ದು, ರಸ್ತೆ ದುರಸ್ತಿ ಹಾಗೂ ಮರುಡಾಮರೀಕರಣಕ್ಕೆ ಆಗ್ರಹಿಸಿ ಪೆರಾಜೆ ಹಿತರಕ್ಷಣಾ ವೇದಿಕೆಯ ವತಿಯಿಂದ ಡಿಸೆಂಬರ್ 1ರಂದು ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಸಂಚಾಲಕ ಅಶೋಕ ಪೀಚೆ ತಿಳಿಸಿದ್ದಾರೆ.



ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 1ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪೆರಾಜೆಯ ಕಾಸ್ಸಾಡಿ ಜಂಕ್ಷನ್‌ನಲ್ಲಿ ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.



ಪೆರಾಜೆ ಗ್ರಾಮದ ಪ್ರಮುಖ ಸಂಪರ್ಕ ರಸ್ತೆಗಳಾದ ಪೆರಾಜೆ-ಕಾಲ್ಪಾಡಿ-ಗಡಿಗುಡ್ಡೆ, ದೊಡ್ಡಡ್ಕ-ನೆಲ್-ಕಾಪುಮಲೆ, ಪೆರಾಜೆ-ದೇವಸ್ಥಾನ-ಮೂಲೆಮಜಲು-ಅಮೆಚೂರು, ಪುತ್ಯ-ಪೆರಾಜೆ, ಕಾಫಿತೋಟ, ವ್ಯಾಪಾರೆ, ನಿಡ್ಯಮಲೆ ಹಾಗೂ ಕುಂದಾಡಿ-ಬಾಳೆಕಜೆ ರಸ್ತೆಗಳು ಸೇರಿದಂತೆ ಗ್ರಾಮದ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಈ ರಸ್ತೆಗಳ ಮೂಲಕ ಸಂಚರಿಸುವುದು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.



ರಸ್ತೆಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ರಸ್ತೆ ಬದಿಯ ಕಾಡು ಕಡಿಯುವ ಕಾರ್ಯವೂ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಸಮಸ್ಯೆ ಎದುರಿಸುವಂತಾಗಿದೆ. ಜನಪ್ರತಿನಿಧಿಗಳು ಮತ್ತು ರಾಜಕೀಯ ಮುಖಂಡರು ರಸ್ತೆ ಅಭಿವೃದ್ಧಿಯ ಭರವಸೆಗಳನ್ನು ನೀಡುತ್ತಿದ್ದಾರೆಯೇ ಹೊರತು, ವಾಸ್ತವದಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.



ಗ್ರಾಮದ ರಸ್ತೆಗಳ ದುಸ್ಥಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರುವ ಉದ್ದೇಶದಿಂದ ಮೌನ ಪ್ರತಿಭಟನೆ ಆಯೋಜಿಸಲಾಗಿದೆ. ಈಗಾಗಲೇ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದರು.



ಮೌನ ಪ್ರತಿಭಟನೆಯ ಬಳಿಕ ರಸ್ತೆಗಳನ್ನು ದುರಸ್ತಿಗೊಳಿಸಲು ಸಂಬಂಧಪಟ್ಟ ಇಲಾಖೆಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು. ಈ ಅವಧಿಯೊಳಗೆ ರಸ್ತೆ ದುರಸ್ತಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಜನವರಿ ತಿಂಗಳಲ್ಲಿ ಹಿತರಕ್ಷಣಾ ವೇದಿಕೆಯ ವತಿಯಿಂದ ಪೆರಾಜೆಯಿಂದ ಮಡಿಕೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಅಶೋಕ ಪೀಚೆ ಎಚ್ಚರಿಕೆ ನೀಡಿದರು.


ಸುದ್ದಿಗೋಷ್ಠಿಯಲ್ಲಿ ಹಿತರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ರಾಮಕೃಷ್ಣ ಮಾಣಿಲತ್ತಾಯ, ಉಪಾಧ್ಯಕ್ಷ ಹೂವಪ್ಪ ಗೌಡ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶರತ್ ಬೊಳುಂಜ, ಕಾರ್ಯದರ್ಶಿ ಪ್ರಸಾದ್ ನಡುಬೈಲ್ ಹಾಗೂ ಸದಸ್ಯ ಘನಶ್ಯಾಮ್ ದೊಡ್ಡಡ್ಕ ಉಪಸ್ಥಿತರಿದ್ದರು.




