ಚಿಕ್ಕಮಗಳೂರು: ಕಾಫಿ ಎಸ್ಟೇಟ್ ಮಾಲೀಕನೊಬ್ಬ ತಮಿಳುನಾಡು ಮೂಲದ ವಲಸೆ ಕಾರ್ಮಿಕರ ಮೇಲೆ ಬಂದೂಕು ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಚಿಕ್ಕಮಗಳೂರು ತಾಲೂಕಿನ ಬಸಗೂಡು ಗ್ರಾಮದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಕಾಫಿ ಎಸ್ಟೇಟ್ ಮಾಲೀಕ ಭರತ್ ಎಂಬಾತ ಕಾರ್ಮಿಕರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಮಹಿಳಾ ಕಾರ್ಮಿಕರ ಮೇಲೂ ಹಲ್ಲೆ ನಡೆಸಲಾಗಿದ್ದು, ಬಂದೂಕು ತೋರಿಸಿ ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿದೆ. ಕಾರ್ಮಿಕರನ್ನು ಜೀತದಾಳುಗಳಂತೆ ನಡೆಸಿಕೊಂಡು, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗಿದೆ ಎಂದು ದೂರಲಾಗಿದೆ.

ಸಂಬಳದ ಹಣದ ವಿಚಾರಕ್ಕೆ ಗಲಾಟೆ?

ಕಾರ್ಮಿಕರು ಕೆಲಸ ತೊರೆದು ಬೇರೆಡೆಗೆ ತೆರಳುವುದಾಗಿ ಹೇಳಿದ್ದೇ ಗಲಾಟೆಗೆ ಕಾರಣ ಎನ್ನಲಾಗಿದೆ. ಈ ಹಿಂದೆ ಮುಂಗಡವಾಗಿ ಪಡೆದಿದ್ದ ಹಣವನ್ನು ಹಿಂದಿರುಗಿಸುವಂತೆ ಎಸ್ಟೇಟ್ ಮಾಲೀಕ ಒತ್ತಾಯಿಸಿದ್ದ. ಕಾರ್ಮಿಕರು ಹಣವನ್ನು ಹಿಂದಿರುಗಿಸಲು ಒಪ್ಪಿಕೊಂಡಿದ್ದರೂ ಮಾಲೀಕ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಆಸ್ಪತ್ರೆಗೆ ದಾಖಲಾದ ಮಹಿಳಾ ಕಾರ್ಮಿಕ

ಹಲ್ಲೆಗೊಳಗಾದ ಮೀನಾ ಎಂಬ ಮಹಿಳಾ ಕಾರ್ಮಿಕರು ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಬಳದ ಹಣದ ವಿಚಾರವಾಗಿ ಮಾತಿನ ಚಕಮಕಿ ನಡೆದು ಗಲಾಟೆ ಆರಂಭವಾಯಿತು. ಸಾಲವಾಗಿ ಪಡೆದಿದ್ದ ಹಣವನ್ನು ಹಿಂದಿರುಗಿಸಿ ಬೇರೆಡೆಗೆ ತೆರಳುವಂತೆ ಮಾತುಕತೆ ನಡೆದಿತ್ತು. ಇದೇ ವಿಚಾರವಾಗಿ ತೋಟದ ಮಾಲೀಕ ಭರತ್ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಮೀನಾ ಆರೋಪಿಸಿದ್ದಾರೆ.

ಘಟನೆಯ ವೇಳೆ ತಮ್ಮ ಕಿವಿಯಲ್ಲಿದ್ದ ಚಿನ್ನದ ಒಡವೆಯೂ ನಾಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ ಮಧ್ಯಪ್ರವೇಶಕ್ಕೆ ಆಗ್ರಹ

ವಲಸೆ ಕಾರ್ಮಿಕರ ಮೇಲೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಕಾರ್ಮಿಕರಿಗೆ ರಕ್ಷಣೆ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಎಸ್ಟೇಟ್ ಮಾಲೀಕ ಭರತ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದಾರೆ.

ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *