ಹೃದಯ ಶ್ರೀಮಂತಿಕೆ ಇದ್ದರೆ ಮಾತ್ರ ಇಂತಹ ಸೇವಾ ಮನೋಭಾವದ ಮೂಲಕ ಜನರ ಪ್ರೀತಿ ಗಳಿಸಲು ಸಾಧ್ಯ: ಭರತ್ ಮುಂಡೋಡಿ

ಸುಳ್ಯ: ಮಡಿಕೇರಿ ನಿವಾಸಿ, ಉದ್ಯಮಿ ಹಾಗೂ ಕೆಪಿಸಿಸಿ ಸದಸ್ಯ ಹೆಚ್.ಎಂ. ನಂದಕುಮಾರ್ ಅವರು ಸುಳ್ಯದ ಕೊಯಿಕುಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ (ಟ್ರ್ಯಾಕ್ ಪ್ಯಾಂಟ್)ಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನವೆಂಬರ್ 28ರಂದು ಕೊಯಿಕುಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ, ಉದ್ಯಮಿಯಾಗಿರುವ ಹೆಚ್.ಎಂ. ನಂದಕುಮಾರ್ ಅವರು ಕಳೆದ ಹಲವು ವರ್ಷಗಳಿಂದ ತಮ್ಮ ದುಡಿಮೆಯ ಒಂದು ಭಾಗವನ್ನು ಅಸಹಾಯಕರು ಹಾಗೂ ದುರ್ಬಲ ವರ್ಗದವರ ನೆರವಿಗೆ ವಿನಿಯೋಗಿಸುತ್ತಾ ಬಂದಿದ್ದಾರೆ. ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಇಂದು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ನೀಡಿ ಮಕ್ಕಳ ಸಂತೋಷದಲ್ಲಿ ಪಾಲುದಾರರಾಗಿರುವುದು ಶ್ಲಾಘನೀಯ. ಹೃದಯ ಶ್ರೀಮಂತಿಕೆ ಇದ್ದರೆ ಮಾತ್ರ ಇಂತಹ ಸೇವಾ ಮನೋಭಾವದ ಮೂಲಕ ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸಲು ಸಾಧ್ಯ. ಅವರ ಸೇವಾ ಕಾರ್ಯಗಳು ಮುಂದೆಯೂ ನಮ್ಮ ತಾಲೂಕಿನಲ್ಲಿ ಮುಂದುವರಿಯಲಿ ಎಂದು ಹಾರೈಸಿದರು.

ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ಎಸ್. ಗಂಗಾಧರ್ ಮಾತನಾಡಿ, ನಂದಕುಮಾರ್ ಅವರು ಕ್ಷೇತ್ರದಾದ್ಯಂತ ಹಲವಾರು ಸಂಘ-ಸಂಸ್ಥೆಗಳು ಹಾಗೂ ಬಡವರಿಗೆ ನಿರಂತರವಾಗಿ ಸಹಾಯಹಸ್ತ ಚಾಚುತ್ತಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳ ಬೇಡಿಕೆಯನ್ನು ಈಡೇರಿಸುವ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೂ ಕೈಜೋಡಿಸಿರುವುದು ಅಭಿನಂದನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಮಕೃಷ್ಣ ಭಟ್ ವಹಿಸಿದ್ದರು.

ವೇದಿಕೆಯಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫಾ, ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಮಿತಿ ಅಧ್ಯಕ್ಷ ಎಸ್. ಸಂಶುದ್ದಿನ್, ಸುಳ್ಯ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಗೋಕುಲ್ ದಾಸ್ ಸುಳ್ಯ, ಲ್ಯಾಂಪ್ ಸೊಸೈಟಿ ನಿರ್ದೇಶಕ ಭವಾನಿಶಂಕರ್ ಕಲ್ಮಡ್ಕ, ಮಿತ್ರ ಯುವಕ ಮಂಡಲ ಕೊಯಿಕುಳಿ ಅಧ್ಯಕ್ಷ ತೀರ್ಥರಾಮ ಕೊಯಿಕುಳಿ ಹಾಗೂ ಶತಮಾನೋತ್ಸವ ಸಮಿತಿ ಖಜಾಂಚಿ ಶಂಬಯ್ಯ ಪಾರೆ ಉಪಸ್ಥಿತರಿದ್ದರು.

ಯುವ ಮುಖಂಡ ಚೇತನ್ ಕಜೆಗದ್ದೆ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಚಂದ್ರನ್ ಕೂಟೇಲು, ಶಹೀದ್ ಪಾರೆ, ನಾರಾಯಣ ಟೈಲರ್, ಭಾಗೀಶ್ ಕೆ.ಟಿ., ವಾರಿಜ ಕೊರಗಪ್ಪ, ಶೈಲಜಾ ನೀರಬಿದಿರೆ, ಜಯಂತ್ ಕೊಯಿಕುಳಿ, ಮಂಜುನಾಥ ಮಡ್ತಿಲ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಾಲೆಯ ಮುಖ್ಯಶಿಕ್ಷಕ ಬೆಳ್ಯಪ್ಪ ಗೌಡ ಕೊಡ್ತುಗುಳಿ ಸ್ವಾಗತಿಸಿ, ವಂದಿಸಿದರು. ಕುರಲ್ ತುಳು ಕೂಟದ ಅಧ್ಯಕ್ಷ ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *