ವಿಸಿ ಫಾರಂ ರೈಲ್ವೆ ಗೇಟ್ ಬಳಿ ಘಟನೆ; ಆತ್ಮಹತ್ಯೆ ಶಂಕೆ, ರೈಲ್ವೆ ಪೊಲೀಸರಿಂದ ತನಿಖೆ
ಮಂಡ್ಯ: ಚಲಿಸುವ ರೈಲಿಗೆ ಸಿಲುಕಿ ವಿವಾಹಿತ ಮಹಿಳೆ ಹಾಗೂ ಯುವಕ ಮೃತಪಟ್ಟಿರುವ ಘಟನೆ ಮಂಡ್ಯ ನಗರದ ಹೊರವಲಯದ ವಿಸಿ ಫಾರಂ ರೈಲ್ವೆ ಗೇಟ್ ಸಮೀಪ ಗುರುವಾರ ಬೆಳಗ್ಗೆ ನಡೆದಿದೆ. ಮೃತರನ್ನು ಸಹನಾ (25) ಹಾಗೂ ರಾಹುಲ್ (23) ಎಂದು ಗುರುತಿಸಲಾಗಿದೆ.
ಮೂಲತಃ ಮಂಡ್ಯ ಜಿಲ್ಲೆಯ ಗುನ್ನಾಯಕನಹಳ್ಳಿಯ ನಿವಾಸಿಯಾಗಿರುವ ಸಹನಾ, ಸುಮಾರು ಎಂಟು ವರ್ಷಗಳ ಹಿಂದೆ ವಿರೇಶ್ ಎಂಬ ಆಟೋ ಚಾಲಕನನ್ನು ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಆರು ವರ್ಷದ ಹೆಣ್ಣು ಮಗು ಹಾಗೂ ಎರಡು ವರ್ಷದ ಗಂಡು ಮಗುವಿದೆ. ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಕುಟುಂಬ ವಾಸವಾಗಿತ್ತು.
ಈ ನಡುವೆ ತಾವು ವಾಸವಿದ್ದ ಕಟ್ಟಡದಲ್ಲೇ ನೆಲೆಸಿದ್ದ ರಾಹುಲ್ ಎಂಬ ಯುವಕನೊಂದಿಗೆ ಸಹನಾಗೆ ಪರಿಚಯವಾಗಿ ಆತ್ಮೀಯತೆ ಬೆಳೆದಿತ್ತು ಎನ್ನಲಾಗಿದೆ. ಈ ವಿಚಾರ ತಿಳಿದ ಬಳಿಕ ಪತಿ-ಪತ್ನಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಹಿರಿಯರು ಹಲವು ಬಾರಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರೂ ಮನಸ್ತಾಪ ಮುಂದುವರಿದಿತ್ತು ಎನ್ನಲಾಗಿದೆ.

ಇತ್ತೀಚೆಗೆ ಇದೇ ವಿಚಾರವಾಗಿ ದಂಪತಿ ನಡುವೆ ಮತ್ತೆ ಜಗಳ ನಡೆದಿದ್ದು, ಬಳಿಕ ಸಹನಾ ಬೆಂಗಳೂರಿನ ಮನೆಯಿಂದ ಹೊರಟು ಮಂಡ್ಯದ ಗುನ್ನಾಯಕನಹಳ್ಳಿಯಲ್ಲಿರುವ ತನ್ನ ತವರು ಮನೆಗೆ ತೆರಳಿದ್ದರು. ಗುರುವಾರ ರಾಹುಲ್ ಕೂಡ ಮಂಡ್ಯಕ್ಕೆ ಬಂದಿದ್ದ ಎನ್ನಲಾಗಿದೆ.
ಇದಾದ ಬಳಿಕ ಇಬ್ಬರೂ ಮಂಡ್ಯದ ವಿಸಿ ಫಾರಂ ರೈಲ್ವೆ ಗೇಟ್ ಸಮೀಪ ರೈಲ್ವೆ ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಬ್ಬರೂ ಚಲಿಸುವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಮಂಡ್ಯ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.
ಮೃತರ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದು, ಆಸ್ಪತ್ರೆಯ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಪ್ರಕರಣ ದಾಖಲಿಸಿಕೊಂಡಿರುವ ಮಂಡ್ಯ ರೈಲ್ವೆ ಪೊಲೀಸರು ಇಬ್ಬರ ಸಾವಿನ ನಿಖರ ಕಾರಣ ಹಾಗೂ ಘಟನೆಯ ಹಿಂದಿನ ಎಲ್ಲ ಆಯಾಮಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.
