ಬಳ್ಳಾರಿ: ತಿಂಗಳಿಗೆ ಕೇವಲ 15 ಸಾವಿರ ರೂ. ಸಂಬಳ ಪಡೆಯುವ ಟೊಯೋಟಾ ಶೋರೂಂ ಉದ್ಯೋಗಿಯೊಬ್ಬರ ವೈಯಕ್ತಿಕ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು, ಅವರ ಹೆಸರಿನಲ್ಲಿ 350 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸಿರುವ ಪ್ರಕರಣ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.



ಬಳ್ಳಿಯ ಟೊಯೋಟಾ ಶೋರೂಂನಲ್ಲಿ ಸರ್ವೀಸ್ ಅಡ್ವೈಸರ್ ಆಗಿ ಕೆಲಸ ಮಾಡುತ್ತಿರುವ ರೋಷನ್ ಎಂಬ ಯುವಕ ಈ ವಂಚನೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಅವರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಮನೆಯ ವಿದ್ಯುತ್ ಬಿಲ್‌ಗಳನ್ನು ಬಳಸಿಕೊಂಡು ‘ರೋಷನ್ ಎಂಟರ್‌ಪ್ರೈಸಸ್’ ಹೆಸರಿನಲ್ಲಿ ಜಿಎಸ್‌ಟಿ ಕಾಯ್ದೆಯಡಿ ಕಂಪನಿಯೊಂದನ್ನು ನೋಂದಾಯಿಸಲಾಗಿದೆ. ಆದರೆ, ನೋಂದಣಿ ವೇಳೆ ರೋಷನ್ ಅವರ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಬದಲಿಗೆ ಬೇರೊಬ್ಬರ ಸಂಪರ್ಕ ವಿವರಗಳನ್ನು ಬಳಸಲಾಗಿದೆ ಎಂದು ತಿಳಿದುಬಂದಿದೆ.



ಕೇವಲ ಐದು ತಿಂಗಳ ಅವಧಿಯಲ್ಲಿ ಪ್ಲಾಸ್ಟಿಕ್ ವ್ಯಾಪಾರದ ಹೆಸರಿನಲ್ಲಿ ಈ ಕಂಪನಿಯ ಮೂಲಕ 350 ಕೋಟಿ ರೂ.ಗೂ ಅಧಿಕ ವಹಿವಾಟು ನಡೆದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಬಳಿಕ ಕಂಪನಿಯ ಜಿಎಸ್‌ಟಿ ಖಾತೆಯನ್ನು ಅಮಾನತುಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ರೋಷನ್ ಅವರ ಮನೆಗೆ ಭೇಟಿ ನೀಡಿ ವಹಿವಾಟಿನ ಕುರಿತು ವಿಚಾರಣೆ ನಡೆಸಿದ್ದಾರೆ. ಅಧಿಕಾರಿಗಳ ಭೇಟಿ ಬಳಿಕವೇ ಕುಟುಂಬಸ್ಥರಿಗೆ ತಮ್ಮ ಮಗನ ಹೆಸರಿನಲ್ಲಿ ಬೃಹತ್ ಮೊತ್ತದ ವಹಿವಾಟು ನಡೆದಿರುವ ವಿಚಾರ ತಿಳಿದುಬಂದಿದೆ.



ರೋಷನ್ ಅವರ ತಂದೆ ಫಕ್ರುದ್ದೀನ್ ಅವರು ಎಸಿ ಗೋದಾಮಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ದಿನಕ್ಕೆ 700 ರೂ. ಕೂಲಿ ಪಡೆಯುತ್ತಿದ್ದಾರೆ. ಸಾಮಾನ್ಯ ಕುಟುಂಬದ ಯುವಕನ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ವಹಿವಾಟು ನಡೆದಿರುವ ವಿಚಾರ ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.
ಘಟನೆಗೆ ಸಂಬಂಧಿಸಿದಂತೆ ರೋಷನ್ ಜಿಎಸ್‌ಟಿ ಕಚೇರಿಗೆ ತೆರಳಿ ಮಾಹಿತಿ ಪಡೆಯಲು ಪ್ರಯತ್ನಿಸಿದರೂ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಬಳ್ಳಾರಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ತಮ್ಮ ಮಗನ ವೈಯಕ್ತಿಕ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ವಂಚನೆ ನಡೆಸಿರುವವರನ್ನು ಪತ್ತೆಹಚ್ಚಿ ಬಂಧಿಸುವಂತೆ ಫಕ್ರುದ್ದೀನ್ ಪೊಲೀಸರನ್ನು ಒತ್ತಾಯಿಸಿದ್ದಾರೆ.
ರೋಷನ್ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಹಿವಾಟಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳು ಹಾಗೂ ಸಂಬಳದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
