ಜನವರಿ 10ರಿಂದ 13ರವರೆಗೆ ನಾಲ್ಕು ದಿನಗಳ ಸಂಚಾರ; ಮಂಗಳೂರಿನಲ್ಲಿ ಚಾಲನೆ, ಬೆಂಗಳೂರಿನಲ್ಲಿ ಸಮಾರೋಪ
ಮಂಗಳೂರು: ಸಮಸ್ತ ಉಲಮಾ ಒಕ್ಕೂಟದ ಶತಮಾನೋತ್ಸವ ಸಮ್ಮೇಳನದ ಪ್ರಚಾರ ಕಾರ್ಯಕ್ಕೆ ವೇಗ ನೀಡುವ ಉದ್ದೇಶದಿಂದ ‘ಸಮಸ್ತ ಸೆಂಟಿನರಿ ಯಾತ್ರೆ’ ಆಯೋಜಿಸಲಾಗಿದೆ. 2027ರ ಜನವರಿ 10ರಿಂದ 13ರವರೆಗೆ ನಾಲ್ಕು ದಿನಗಳ ಕಾಲ ರಾಜ್ಯದ ವಿವಿಧ ಪ್ರಮುಖ ನಗರಗಳ ಮೂಲಕ ಸಂಚರಿಸಲಿರುವ ಯಾತ್ರೆಗೆ ಮಂಗಳೂರಿನಲ್ಲಿ ಚಾಲನೆ ದೊರೆಯಲಿದ್ದು, ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ.



ಜನವರಿ 10ರಂದು ಪೂರ್ವಾಹ್ನ ಮಂಗಳೂರಿನಲ್ಲಿ ಯಾತ್ರೆಯ ಉದ್ಘಾಟನೆ ನಡೆಯಲಿದೆ. ಬಳಿಕ ಕುಂದಾಪುರ, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಹಾಸನ, ಮೈಸೂರು ಹಾಗೂ ಮಂಡ್ಯ ಮಾರ್ಗವಾಗಿ ಯಾತ್ರೆ ಮುಂದುವರಿಯಲಿದೆ. ಜನವರಿ 13ರಂದು ಮುಸ್ಸಂಜೆ ಬೆಂಗಳೂರಿನಲ್ಲಿ ನಡೆಯಲಿರುವ ಸಮಸ್ತ ರಾಷ್ಟ್ರೀಯ ಸಮ್ಮೇಳನದೊಂದಿಗೆ ಯಾತ್ರೆ ಸಮಾರೋಪಗೊಳ್ಳಲಿದೆ.



ಜಂಇಯ್ಯತುಲ್ ಉಲಮಾ, ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ವೈಎಸ್, ಎಸ್ಸೆಸ್ಸೆಫ್, ಎಸ್ಜೆಎಂ ಹಾಗೂ ಎಸ್ಎಂಎ ಸಂಘಟನೆಗಳ ನೇತೃತ್ವದಲ್ಲಿ ಯಾತ್ರೆ ಸಂಘಟಿಸಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳ ಧಾರ್ಮಿಕ ಹಾಗೂ ಸಾಮಾಜಿಕ ವಲಯದ ಪ್ರಮುಖರನ್ನು ಒಳಗೊಂಡ ಈ ಯಾತ್ರೆಯಲ್ಲಿ ಹಲವು ಉನ್ನತ ಉಲಮಾಗಳು, ಸಾದಾತುಗಳು ಹಾಗೂ ಉಮರಾ ಪ್ರಮುಖರು ಭಾಗವಹಿಸಲಿದ್ದಾರೆ.



ಶತಮಾನೋತ್ಸವದ ಸಂದೇಶವನ್ನು ರಾಜ್ಯದ ವಿವಿಧ ಭಾಗಗಳಿಗೆ ತಲುಪಿಸುವುದು ಹಾಗೂ ರಾಷ್ಟ್ರೀಯ ಸಮ್ಮೇಳನದ ಪ್ರಚಾರಕ್ಕೆ ಮತ್ತಷ್ಟು ಉತ್ತೇಜನ ನೀಡುವುದು ಯಾತ್ರೆಯ ಪ್ರಮುಖ ಉದ್ದೇಶವಾಗಿದೆ.
ಯಾತ್ರೆಯ ಯಶಸ್ವಿ ನಿರ್ವಹಣೆಗೆ ಸಮಿತಿ
ಯಾತ್ರೆಯ ಪೂರ್ವಸಿದ್ಧತೆ, ಸಂಘಟನೆ ಹಾಗೂ ಸುಸೂತ್ರ ನಿರ್ವಹಣೆಗಾಗಿ ವಿಶೇಷ ಸಮಿತಿಯನ್ನು ರಚಿಸಲಾಗಿದೆ. ಕೆ.ಎಂ. ಅಬೂಬಕರ್ ಸಿದ್ದೀಕ್ ಅವರನ್ನು ನಿರ್ದೇಶಕರಾಗಿಯೂ ಹಸೈನಾರ್ ಆನೆಮಹಲ್ ಅವರನ್ನು ಸಂಯೋಜಕರಾಗಿಯೂ ನೇಮಕ ಮಾಡಲಾಗಿದೆ.



ಎಸ್.ಪಿ. ಹಂಝ ಸಖಾಫಿ, ಶಾಫಿ ಸಅದಿ ಬೆಂಗಳೂರು, ಡಾ. ಎಂ.ಎಸ್.ಎಂ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಕೆ.ಕೆ.ಎಂ. ಕಾಮಿಲ್ ಸಖಾಫಿ, ಅಬ್ದುರಹ್ಮಾನ್ ರಝ್ವಿ ಅಲ್ ಫುರ್ಖಾನಿ ಕಲ್ಕಟ್ಟ, ಅಶ್ರಫ್ ಕಿನಾರ, ಶಾಹುಲ್ ಹಮೀದ್ ಮದನಿ ತೀರ್ಥಹಳ್ಳಿ, ಅಲಿ ತುರ್ಕಳಿಕೆ, ಸಲೀಂ ಕನ್ಯಾಡಿ, ರಹೀಂ ಸಅದಿ ಕತಾರ್ ಹಾಗೂ ಇಸ್ಮಾಈಲ್ ಸಖಾಫಿ ಕೊಂಡಂಗೇರಿ ಸಮಿತಿಯ ಸದಸ್ಯರಾಗಿದ್ದಾರೆ.
ಸಭೆಯಲ್ಲಿ ಅಧಿಕೃತ ಘೋಷಣೆ
ಬಿ.ಸಿ. ರೋಡ್ನ ಸಾಗರ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸುನ್ನೀ ಕೋ-ಆರ್ಡಿನೇಶನ್ ಸಮಿತಿ ಬೆಂಗಳೂರು ಜಿಲ್ಲಾ ಅಧ್ಯಕ್ಷ ಸಯ್ಯದ್ ಇಬ್ರಾಹಿಂ ಬಾಫಖಿ ತಂಙಳ್ ಅವರು ‘ಸಮಸ್ತ ಸೆಂಟಿನರಿ ಯಾತ್ರೆ’ಯನ್ನು ಅಧಿಕೃತವಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಯಾತ್ರೆಯ ಸಂಘಟನೆ ಹಾಗೂ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು.



