ಶಾಲೆ ಮುಗಿಸಿ ಮನೆಗೆ ತೆರಳಲು ರಸ್ತೆ ದಾಟುತ್ತಿದ್ದ 8 ವರ್ಷದ ಬಾಲಕನಿಗೆ ಖಾಸಗಿ ಬಸ್ ಡಿಕ್ಕಿಯಾಗಿ, ಬಸ್ಸಿನ ಹಿಂಬದಿಯ ಚಕ್ರ ಹರಿದ ಪರಿಣಾಮ ಬಾಲಕ ಮೃತಪಟ್ಟ ದಾರುಣ ಘಟನೆ ನವಂಬರ್ 26ರಂದು ನಗರದ ಕಂಕನಾಡಿಯಲ್ಲಿ ನಡೆದಿದೆ.

ಗದಗ ಜಿಲ್ಲೆಯ ರೋಣ ಮೂಲದ, ಪ್ರಸ್ತುತ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಲಕ್ಷ್ಮೀ ಮತ್ತು ಅಶೋಕ್ ದಂಪತಿಯ ಪುತ್ರ ವಿಶ್ವಾಸ್ (8) ಮೃತ ಬಾಲಕ.

ಈತ ಕಂಕನಾಡಿಯ ಸೈಂಟ್ ಜೋಸೆಫ್ ಅನುದಾನಿತ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಬುಧವಾರ ಸಂಜೆ ಶಾಲೆ ಮುಗಿದ ಬಳಿಕ ಮನೆಗೆ ತೆರಳಲು ಬಾಲಕ ಶಾಲೆಯಿಂದ ಹೊರಬಂದಿದ್ದ. ಸಾಮಾನ್ಯವಾಗಿ ತಾಯಿ ಶಾಲೆಗೆ ಬಂದು ಮಗನನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ, ಅಂದು ತಾಯಿ ಬಾರದ ಹಿನ್ನೆಲೆಯಲ್ಲಿ ಬಾಲಕ ತಾನೇ ಮನೆ ಕಡೆಗೆ ತೆರಳಲು ಕಂಕನಾಡಿ–ಫಳ್ನೀರ್ ರಸ್ತೆಯನ್ನು ದಾಟುತ್ತಿದ್ದ ವೇಳೆ ಸ್ಟೇಟ್ ಬ್ಯಾಂಕ್ ಕಡೆಗೆ ಸಂಚರಿಸುತ್ತಿದ್ದ ‘ರಾಜಲಕ್ಷ್ಮೀ’ ಹೆಸರಿನ 4ನೇ ನಂಬರಿನ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಬಾಲಕನ ಮೇಲೆ ಬಸ್ಸಿನ ಎಡಭಾಗದ ಹಿಂಬದಿಯ ಚಕ್ರ ಹರಿದ ಪರಿಣಾಮ ದೇಹದ ಒಂದು ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ತಕ್ಷಣವೇ ಬಸ್ ಸಿಬ್ಬಂದಿ ಗಾಯಾಳು ಬಾಲಕನನ್ನು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃತಪಟ್ಟಿದ್ದಾನೆ.

ಘಟನೆಗೆ ಸಂಬಂಧಿಸಿ ಬಸ್ ಚಾಲಕನ ನಿರ್ಲಕ್ಷ್ಯದ ಆರೋಪದಡಿ ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *