ಪೊಲೀಸರ ತನಿಖೆಯಲ್ಲಿ ಬಯಲಾದ ಸತ್ಯ, ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪುಣಚ ಎಂಬಲ್ಲಿ ಎರಡು ವರ್ಷಗಳ ಹಿಂದೆ ವಿವಾಹಿತ ಮಹಿಳೆಯೋರ್ವರು ಮೃತಪಟ್ಟಿದ್ದು ಮೃತ ಮಹಿಳೆಯ ಪತಿ,ಪತ್ನಿ ಹೃದಯಘಾತದಿಂದ ಮರಣ ಹೊಂದಿದ್ದಾರೆ ಎಂದು ಬಿಂಬಿಸುವ ಪ್ರಯತ್ನವನ್ನು ಮಾಡಿದ್ದ.
ಈ ಘಟನೆಯ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮೃತ ಮಹಿಳೆಯ ಪತಿಯಿಂದ ಸತ್ಯಾಂಶವನ್ನು ಹೊರಹಾಕಿದ್ದು ಆತನ ಪತ್ನಿಯ ಸಾವಿಗೆ ಈತನೇ ಕಾರಣ ಎಂಬುದನ್ನು ದೃಢಪಡಿಸಿಕೊಂಡು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವಿಚಾರಣೆ ನಡೆಸಿದ ನ್ಯಾಯಾಲಯವು ಆತನಿಗೆ ಐದು ವರ್ಷದ ಸಾದಾ ಜೈಲು ಶಿಕ್ಷೆ ತೀರ್ಪು ನೀಡಿ ಆದೇಶ ಮಾಡಿದೆ. ಘಟನೆ ನಡೆದ ದಿನದಂದು ಮಹಿಳೆಯ ಗಂಡ ನೆರೆಮನೆಯವರಿಗೆ ಹೃದಯಾಘಾತದಿಂದ ತನ್ನ ಪತ್ನಿ ಬಿದ್ದಿರುವುದಾಗಿ ತಿಳಿಸಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ಕೊಂಡೋಗಿದ್ದು ಅಷ್ಟರಲ್ಲಿ ಮಹಿಳೆ ಮೃತಪಟ್ಟಿದ್ದರು.

ಮಹಿಳೆಯ ಮೃತದೇಹದಲ್ಲಿ ಗಾಯಗಳಿರುವ ಹಿನ್ನೆಲೆಯಲ್ಲಿ ಸಂಶಯ ಗೊಂಡ ಪೊಲೀಸರು ವಿಟ್ಲ ಠಾಣೆಯಲ್ಲಿ ಅಕ್ರ 184/2024 u/s 103(1) BNS ರಂತೆ ಪ್ರಕರಣ ದಾಖಲಿಸಿಕೊಂಡಿದ್ದು ಸದ್ರಿ ಪ್ರಕರಣದ ತನಿಖೆ ನಡೆಸಿದ ಪ್ರಕರಣದ ತನಿಖಾಧಿಕಾರಿಯಾಗಿದ್ದ ಪೊಲೀಸ್ ನಿರೀಕ್ಷಕರಾಗಿದ್ದ ನಾಗರಾಜ್ H E ರವರು ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ಮೃತ ಮಹಿಳೆಯ ಗಂಡ ಸಂಜೀವ ನಾಯ್ಕ ಎಂಬಾತನ ವಿರುದ್ದ ನ್ಯಾಯಾಲಯಕ್ಕೆ ದೊಷಾರೋಪಣಾ ಪಟ್ಟಿ ಸಲ್ಲಿಸಿರುತ್ತಾರೆ.

ಮಂಗಳೂರು ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಧೀಶರಾದ ಜಗದೀಶ್ ವಿ ಎನ್ ರವರು, ಆರೋಪಿತನ ವಿರುದ್ದದ ಆರೋಪಿಗಳು ಸಾಬೀತಾದ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023, ಕಾಯ್ದೆ 105 ಭಾಗ 2 ರ ಅಡಿಯಲ್ಲಿ ಅಪರಾಧ ಸಾಬೀತಾಗಿ 5 ವರ್ಷ ಸಾದಾ ಜೈಲು ಶಿಕ್ಷೆ ರೂ.5,000 ದಂಡ, ದಂಡ ಕಟ್ಟದಿದ್ದರೆ: 6 ತಿಂಗಳು ಜೈಲು ಹಾಗೂ BNS ಸೆಕ್ಷನ್ 240 ಅಡಿಯಲ್ಲಿ: 6 ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಿ ಅದೇಶಿಸಿರುತ್ತಾರೆ. ಪ್ರಕರಣದ ವಿಚಾರಣೆಯಲ್ಲಿ ಸರ್ಕಾರಿ ಅಭಿಯೋಜಕರಾಗಿ ಜ್ಯೋತಿ ನಾಯ್ಕ್ ರವರು ವಾದಮಂಡನೆ ನಡೆಸಿರುತ್ತಾರೆ.












