ಸುಳ್ಯ: ಕಲ್ಲುಗುಂಡಿ ಸಮೀಪ ರಬ್ಬರ್ ಮರ ಕತ್ತರಿಸುವ ಕೆಲಸಕ್ಕೆ ಆಗಮಿಸಿದ್ದ ಕಾರ್ಮಿಕರೊಬ್ಬರು ಕೆಲಸ ಆರಂಭಿಸಿದ ಕೆಲವೇ ಹೊತ್ತಿನಲ್ಲಿ ಅಸ್ವಸ್ಥಗೊಂಡು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟ ಘಟನೆ ನಡೆದಿದೆ.

ತೋಡಿಕಾನ ಮೂಲದ ನಿರಂಜನ್ ಅವರು ಬೆಳಿಗ್ಗೆ ಕಲ್ಲುಗುಂಡಿ ಉಳುವಾರು ರಾಜಗೋಪಾಲ್ ಅವರ ಮನೆಯಲ್ಲಿ ರಬ್ಬರ್ ಮರ ಕತ್ತರಿಸುವ ಕೆಲಸಕ್ಕೆ ಆಗಮಿಸಿದ್ದರು. ಕೆಲಸ ಆರಂಭಿಸಿದ ಕೆಲವೇ ಹೊತ್ತಿನಲ್ಲಿ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣ ಕೇಶವ ಬಂಗ್ಲೆಗುಡ್ಡೆಯವರ ರಿಕ್ಷಾದಲ್ಲಿ ಕಲ್ಲುಗುಂಡಿಯ ಶ್ಯಾಮ್ ಕ್ಲಿನಿಕ್‌ಗೆ ಕರೆತರಲಾಯಿತು.

ಅಲ್ಲಿ ವೈದ್ಯರು ಪರೀಕ್ಷಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ತಕ್ಷಣ ಸುಳ್ಯದ KVG ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಲ್ಲುಗುಂಡಿ AIKMCC ಆಂಬುಲೆನ್ಸ್‌ನಲ್ಲಿ ನಿರಂಜನ್ ಅವರನ್ನು ಸುಳ್ಯಕ್ಕೆ ಕರೆದೊಯ್ಯಲಾಗುತ್ತಿತ್ತು. ಆದರೆ ಆಸ್ಪತ್ರೆ ತಲುಪುವ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಅಸ್ವಸ್ಥಗೊಂಡ ನಿರಂಜನ್ ಅವರಿಗೆ ಆರಂತೋಡು ಸಮೃದ್ಧಿ ಆಂಬುಲೆನ್ಸ್ ಚಾಲಕ ಶರತ್ ಆರಂತೋಡು, ತಾಜುದ್ದೀನ್ ಟರ್ಲಿ ಹಾಗೂ ಕೇಶವ ಬಂಗ್ಲೆಗುಡ್ಡೆಯವರು ನಿರಂತರವಾಗಿ ಸಿಪಿಆರ್ (CPR) ನೀಡುವ ಮೂಲಕ ಜೀವ ಉಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ನಿರಂಜನ್ ಅವರು ನುರಿತ ಮರ ಕಟಾವು ಕಾರ್ಮಿಕರಾಗಿದ್ದರು ಎಂದು ತಿಳಿದುಬಂದಿದೆ. ಮೃತ್ಯುವಿನ ನಿಖರ ಕಾರಣಕ್ಕೆ ವೈದ್ಯಕೀಯ ವರದಿ ಬಳಿಕ ಹೆಚ್ಚಿನ ಸ್ಪಷ್ಟತೆ ದೊರೆಯಲಿದೆ.

Leave a Reply

Your email address will not be published. Required fields are marked *