ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಅಭಿಯಾನದ ರಾಜ್ಯಮಟ್ಟದ ಯಾತ್ರೆ ಶ್ಲಾಘನೀಯ: ವೈ.ಎಸ್. ಹರಗಿ

ಜಾಲ್ಸೂರು: ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ವತಿಯಿಂದ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕನ್ನಡ ಯಾತ್ರೆ ಶ್ಲಾಘನೀಯವಾಗಿದೆ ಎಂದು ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್. ಹರಗಿ ಹೇಳಿದರು.

ಅ. 28ರಂದು ಜಾಲ್ಸೂರಿನಲ್ಲಿ ನಡೆದ ಕನ್ನಡ ಯಾತ್ರಾ ರಥದ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬ ನಾಗರಿಕನ ಸಹಕಾರವೂ ಅಗತ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯೊಂದಿಗೆ ಸ್ಥಳೀಯ ನಿವಾಸಿಗಳು ಕೈಜೋಡಿಸಿದರೆ ಯಾವುದೇ ಶಾಲೆಯೂ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ. ಈ ನಿಟ್ಟಿನಲ್ಲಿ ಅಭಿಯಾನವು ಹಮ್ಮಿಕೊಂಡಿರುವ ಕನ್ನಡ ಯಾತ್ರೆ ಯಶಸ್ವಿಯಾಗಲಿ ಎಂದು ಅವರು ಶುಭ ಹಾರೈಸಿದರು.

ಯಾತ್ರೆಯ ನೇತೃತ್ವ ವಹಿಸಿರುವ ಅಭಿಯಾನದ ಕರ್ನಾಟಕ ರಾಜ್ಯಾಧ್ಯಕ್ಷ ಉನೈಸ್ ಪರಾಜೆ ಹಾಗೂ ತಂಡದವರನ್ನು ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಿಯಾನದ ರಾಜ್ಯ ಸಮಿತಿಯ ಗೌರವ ಸಲಹೆಗಾರ ಹಾಗೂ ಮಹಾ ರಕ್ತದಾನಿ ಪಿ.ಬಿ. ಸುಧಾಕರ್ ವಹಿಸಿದ್ದರು. ಅವರು ಮಾತನಾಡಿ, ಸರಕಾರಿ ಶಾಲೆಗಳ ಉಳಿವಿನ ಕಾಳಜಿಯಿಂದ ಅಭಿಯಾನವು ಹಮ್ಮಿಕೊಂಡಿರುವ ಈ ಜಾಗೃತಿ ಯಾತ್ರೆಗೆ ನಾಡಿನ ಸಮಸ್ತ ಜನತೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬದಿಯಡ್ಕ ತುಳು ಭವನದ ಮುಖ್ಯಸ್ಥ ಅಖಿಲೇಶ್ ನಗುಮುಗಂ ಹಾಗೂ ಸುಳ್ಯ ಅಗ್ನಿಶಾಮಕ ಠಾಣೆಯ ಉಪನಿರೀಕ್ಷಕ ಕಿರಣ್ ಕುಮಾರ್ ಮಾತನಾಡಿ, ಕನ್ನಡ ಯಾತ್ರೆಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾಸರಗೋಡು ವಿಭಾಗದ ಮುಖ್ಯಸ್ಥ ತಾರಾನಾಥ ರೈ, ಕಲಾವಿದ ವಸಂತ ಬಾರಡ್ಕ (ಕಾಸರಗೋಡು), ಜಾಲ್ಸೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಬಾಬು ಮತ್ತು ಅಶೋಕ್ ಅಡ್ಯಾರ್, ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಯಸ್ವಿತ್ ಕಾಳಮ್ಮನೆ, ಹಿರಿಯ ಉದ್ಯಮಿ ಎಂ.ಎಸ್. ಭಟ್, ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಜಿಲ್ಲಾ ಗೌರವ ಸಲಹೆಗಾರ ಹಮೀದ್ ಸುಣ್ಣಮೂಲೆ, ನಝೀರ್ ಶಾಂತಿನಗರ, ತಾಲೂಕು ಸಮಿತಿಯ ಉಪಾಧ್ಯಕ್ಷರಾದ ಶಂಕರ್ ಪೆರಾಜೆ ಮತ್ತು ರಂಜಿತ್ ಪೂಜಾರಿ, ಸುಳ್ಯ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುಜಾತ ಕದಿಕಡ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಭಿಯಾನದ ಸುಳ್ಯ ತಾಲೂಕು ಅಧ್ಯಕ್ಷ ಹಸೈನಾರ್ ಜಯನಗರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಅಶೋಕ್ ಪೀಚೆ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ಗಣ್ಯರು ಹಾಗೂ ಮುಖಂಡರು ಕನ್ನಡ ಯಾತ್ರಾ ರಥದೊಂದಿಗೆ ಕಿರು ಜಾಥಾ ನಡೆಸಿ ಯಾತ್ರೆಗೆ ಚಾಲನೆ ನೀಡಿದರು.

ಮುಚ್ಚುವ ಹಂತದಲ್ಲಿರುವ ಸರಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದು, ಖಾಸಗಿ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷಾ ವಿಷಯವನ್ನು ಕಡ್ಡಾಯಗೊಳಿಸುವುದು, ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಆದ್ಯತೆ ಹಾಗೂ ಮೀಸಲಾತಿ ನೀಡುವುದು ಮತ್ತು ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಹಾಗೂ ಸಮಾನ ಶಿಕ್ಷಣವನ್ನು ಖಾತರಿಪಡಿಸುವುದು ಅಭಿಯಾನದ ಪ್ರಮುಖ ಬೇಡಿಕೆಗಳಾಗಿವೆ. ಈ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಜನಜಾಗೃತಿ ಮೂಡಿಸುವುದು ಕನ್ನಡ ಯಾತ್ರೆಯ ಮುಖ್ಯ ಉದ್ದೇಶವಾಗಿದೆ.

ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ : https://www.instagram.com/p/DfFSHVtziBh/

Leave a Reply

Your email address will not be published. Required fields are marked *