ಹನುಮ ಜಯಂತಿಗೂ ಮುನ್ನ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ

ಕುಶಾಲನಗರ: ಕರ್ನಾಟಕ ರಾಜ್ಯ ಕಾವೇರಿ ನೀರಾವರಿ ನಿಗಮದ ಯೋಜನೆಯಡಿ ಮಂಜೂರಾಗಿರುವ ಸುಮಾರು ₹5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ. ಮಂತರ್ ಗೌಡ ಅವರು ನವೆಂಬರ್ 17ರಂದು ಕುಶಾಲನಗರ ಪ್ರವಾಸಿ ಮಂದಿರದ ಬಳಿ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ ಅವರು, ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಈ ಹಿಂದೆ ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ಯೋಜನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಂಡಿದ್ದರು. ಅದರಂತೆ ಸುಮಾರು ₹5 ಕೋಟಿ ಅನುದಾನ ಮಂಜೂರಾಗಿದ್ದು, ಕುಶಾಲನಗರದ ಅಭಿವೃದ್ಧಿಗೆ ಈ ಯೋಜನೆ ಮಹತ್ವದ ಕೊಡುಗೆ ನೀಡಲಿದೆ ಎಂದರು.



ಯೋಜನೆಯಡಿ 1,080 ಮೀಟರ್ ಉದ್ದದ ಡಾಂಬರು ರಸ್ತೆ, 550 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ಹಾಗೂ ವಿವಿಧ ಮೋರಿಗಳ ನಿರ್ಮಾಣ ಕಾಮಗಾರಿ ನಡೆಯಲಿದೆ. ಒಟ್ಟಾರೆ ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.



ಬಳಿಕ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಶಾಸಕರು, ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕು. ಮುಂಬರುವ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಹನುಮ ಜಯಂತಿ ಉತ್ಸವಕ್ಕೂ ಮುನ್ನ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಬೇಕು. ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲೇ ಖುದ್ದು ಉಪಸ್ಥಿತರಿದ್ದು, ಕಾಮಗಾರಿಯ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚಿಸಿದರು.



ಕುಶಾಲನಗರ ಪ್ರವಾಸಿ ಮಂದಿರದ ಮುಂಭಾಗದ ಜಂಕ್ಷನ್‌ನಿಂದ ಹಾರಂಗಿ ಇಲಾಖೆಯ ಕಚೇರಿವರೆಗಿನ ರಸ್ತೆ, ವಿವಿಧ ಬಡಾವಣೆಗಳ ಸಂಪರ್ಕ ರಸ್ತೆಗಳು ಹಾಗೂ ನ್ಯಾಯಾಲಯದ ಸಮೀಪದ ರಸ್ತೆಗಳ ಅಭಿವೃದ್ಧಿಯೂ ಈ ಯೋಜನೆಯ ವ್ಯಾಪ್ತಿಯಲ್ಲಿ ಒಳಗೊಂಡಿದೆ.



ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕಿರಿಕೊಡ್ಲಿಮಠದ ಶ್ರೀ ಸದಾಶಿವ ಸ್ವಾಮೀಜಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಪುರಸಭೆಯ ಮಾಜಿ ಸದಸ್ಯರಾದ ಸುಂದರೇಶ್, ದಿನೇಶ್, ಜಯಲಕ್ಷ್ಮಮ್ಮ, ಜಗದೀಶ್, ಪ್ರಕಾಶ್, ಮಾಜಿ ನಾಮನಿರ್ದೇಶಿತ ಸದಸ್ಯ ನಂಜುಂಡಸ್ವಾಮಿ, ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ್, ಗೋವಿಂದಪ್ಪ, ಸದಸ್ಯ ಆನಂದಕುಮಾರ್, ಮುಖಂಡರಾದ ಶಿವಶಂಕರ್, ಕಿರಣ್ ಸೇರಿದಂತೆ ಹಲವು ಮುಖಂಡರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
