1 ಲಕ್ಷಕ್ಕೂ ಅಧಿಕ ಜನರಿಗೆ ದೀಪಾವಳಿ ಕೊಡುಗೆ; ಲಕ್ಷಕ್ಕೂ ಹೆಚ್ಚು ದೋಸೆ, ಭರ್ಜರಿ ಭೋಜನದ ಆತಿಥ್ಯ

ಪುತ್ತೂರು: ರೈ ಎಸ್ಟೇಟ್ & ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾದ ‘ಅಶೋಕ ಜನಮನ 2026’ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದು, ಅವರಿಗೆ ಸುಮಾರು 4 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ದೀಪಾವಳಿ ಉಡುಗೊರೆಗಳನ್ನು ವಿತರಿಸಲಾಯಿತು.


ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ದೀಪಾವಳಿ ಉಡುಗೊರೆ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಮೂರು ವಿಧದ ಉಡುಗೊರೆಗಳನ್ನು ಆಯ್ಕೆಗೆ ನೀಡಲಾಗಿದ್ದು, ತಟ್ಟೆ, ಸೀರೆ ಹಾಗೂ ಬೆಡ್ಶೀಟ್ಗಳ ಪೈಕಿ ತಮಗೆ ಇಷ್ಟವಾದ ಒಂದು ವಸ್ತುವನ್ನು ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು.


1 ಲಕ್ಷಕ್ಕೂ ಅಧಿಕ ದೋಸೆ, ಮಧ್ಯಾಹ್ನ ಭೋಜನದ ವ್ಯವಸ್ಥೆ
ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಹಸ್ರಾರು ಸಾರ್ವಜನಿಕರಿಗೆ ವಿಶೇಷ ಆಹಾರ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗಿನಿಂದ ಸಂಜೆಯವರೆಗೆ ನಿರಂತರವಾಗಿ ಬಿಸಿಬಿಸಿ ದೋಸೆಗಳನ್ನು ತಯಾರಿಸಿ ವಿತರಿಸುವ ವ್ಯವಸ್ಥೆ ಮಾಡಲಾಗಿದ್ದು, ಒಂದು ಲಕ್ಷಕ್ಕೂ ಅಧಿಕ ದೋಸೆಗಳನ್ನು ಸಾರ್ವಜನಿಕರಿಗೆ ನೀಡಲಾಯಿತು.


ಇದರೊಂದಿಗೆ ಮಧ್ಯಾಹ್ನ 12.30ರಿಂದ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಸಾವಿರಾರು ಜನರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಉಡುಗೊರೆ ವಿತರಣೆ ಹಾಗೂ ಆಹಾರ ಆತಿಥ್ಯ ವಿಶೇಷ ಗಮನ ಸೆಳೆಯಿತು.




