ಬೆಳ್ಳಾರೆ: SKJMCC ವತಿಯಿಂದ ಆಯೋಜಿಸಲಾದ ಮುಸಾಬಖ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆಯ ಸುಳ್ಯ ರೇಂಜ್ ಮಟ್ಟದ ಸ್ಪರ್ಧೆಗಳಲ್ಲಿ ಬೆಳ್ಳಾರೆ ಮದ್ರಸ ಸತತ ನಾಲ್ಕನೇ ಬಾರಿಗೆ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಮದ್ರಸದ 17 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.


ನವೆಂಬರ್ 14ರಂದು ಅರಂಬೂರಿನಲ್ಲಿ ನಡೆದ ಮುಅಲ್ಲಿಂ ಫಸ್ಟ್ ಸ್ಪರ್ಧೆಯಲ್ಲಿ ಬೆಳ್ಳಾರೆ ಮದ್ರಸ 6 ಪ್ರಥಮ ಹಾಗೂ 2 ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿತು. ಒಟ್ಟು 89 ಅಂಕಗಳನ್ನು ಗಳಿಸುವ ಮೂಲಕ ಮುಅಲ್ಲಿಂ ವಿಭಾಗದ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.


ನವೆಂಬರ್ 15ರಂದು ಪಾಜಪಳ್ಳದಲ್ಲಿ ನಡೆದ ವಿದ್ಯಾರ್ಥಿ ಫಸ್ಟ್ ಸ್ಪರ್ಧೆಯಲ್ಲಿ ಮದ್ರಸದ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ಒಟ್ಟು 13 ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ 17 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೆ, 10 ಸ್ಪರ್ಧೆಗಳಲ್ಲಿ ದ್ವಿತೀಯ ಹಾಗೂ 10 ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟು 294 ಅಂಕಗಳನ್ನು ಗಳಿಸಿದ ಮದ್ರಸ ಸತತ ನಾಲ್ಕನೇ ಬಾರಿಗೆ ಚಾಂಪಿಯನ್ಶಿಪ್ ಗೆದ್ದು ಸಾಧನೆ ಮಾಡಿದೆ.


ಮುಅಲ್ಲಿಂ ವಿಭಾಗದಲ್ಲಿ ಮುಹಮ್ಮದ್ ನವವಿ ಮುಂಡೋಳೆ, ಸಬ್ ಜೂನಿಯರ್ ವಿಭಾಗದಲ್ಲಿ ಮುಹಮ್ಮದ್ ಹಾತಿಮ್ ಹಾಗೂ ಸೀನಿಯರ್ ವಿಭಾಗದಲ್ಲಿ ಅಹ್ಮಾನ್ ಫಾಝ್ ಕಲಾ ಪ್ರತಿಭೆಗಳಾಗಿ ಆಯ್ಕೆಯಾಗಿದ್ದಾರೆ.


ಮದ್ರಸದ ಅಧ್ಯಾಪಕರ ಸೂಕ್ತ ಮಾರ್ಗದರ್ಶನ, ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಹಾಗೂ ಆಡಳಿತ ಸಮಿತಿ ಮತ್ತು ಪೋಷಕರ ನಿರಂತರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಮದ್ರಸದ ಸದರ್ ಮುಅಲ್ಲಿಂ ಮುಹಮ್ಮದ್ ನವವಿ ಮುಂಡೋಳೆ ತಿಳಿಸಿದ್ದಾರೆ.
