ಮತಾಂತರ ನಿಷೇಧ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸಲು ಒತ್ತಾಯ – ಮುಸ್ಲಿಮರ 2ಬಿ ಮೀಸಲಾತಿ ಮರುಸ್ಥಾಪನೆ ಸೇರಿದಂತೆ ಐದು ನಿರ್ಣಯಗಳ ಅಂಗೀಕಾರ – ಬೆಳಗಾವಿ ಅಧಿವೇಶನದೊಳಗೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ‘ಕರ್ನಾಟಕದ ಅಲ್ಪಸಂಖ್ಯಾತರು ಹಾಗೂ ಶೋಷಿತರ ಧ್ವನಿ’ ವೇದಿಕೆಯ ನೇತೃತ್ವದಲ್ಲಿ ಗುರುವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಿತು.

ಮುಸ್ಲಿಂ, ಕ್ರೈಸ್ತ ಧರ್ಮಗುರುಗಳು, ದಲಿತ, ರೈತ, ಕಾರ್ಮಿಕ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಒಂದೇ ವೇದಿಕೆಯಲ್ಲಿ ಸೇರಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮತಾಂತರ ನಿಷೇಧ ಕಾಯ್ದೆ ರದ್ದು, ಜಾನುವಾರು ಹತ್ಯೆ ನಿಷೇಧ ಕಾಯ್ದೆ ವಾಪಸ್, ಮುಸ್ಲಿಮರ 2ಬಿ ಮೀಸಲಾತಿ ಮರುಸ್ಥಾಪನೆ ಹಾಗೂ ದ್ವೇಷ ಭಾಷಣ ತಡೆಗೆ ಕಠಿಣ ಕಾನೂನು ಜಾರಿ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟರು.

ಸಮಾವೇಶದ ಅಂತ್ಯದಲ್ಲಿ ಐದು ಪ್ರಮುಖ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದೊಳಗೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿದವು.

‘ಇದು ರಾಜಕೀಯ ಅಥವಾ ಧಾರ್ಮಿಕ ಸಭೆಯಲ್ಲ, ಶೋಷಿತರ ಸಮಾವೇಶ’

ಸಮಾವೇಶದ ಆರಂಭದಲ್ಲಿ ಫಾದರ್ ವಿನಯ್ ಕುಮಾರ್ ಸ್ವಾಗತಿಸಿದರು. ಫಾದರ್ ಅರುಣ್ ಲೂಯಿಸ್ ಹಾಗೂ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ ಸಂಚಾಲಕ ಯಾಸೀನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಮಹಾಧರ್ಮಕ್ಷೇತ್ರದ ಆರ್ಚ್‌ಬಿಷಪ್ ಡಾ. ಪೀಟರ್ ಮಚಾದೊ, “ಇದೊಂದು ರಾಜಕೀಯ ಅಥವಾ ಧಾರ್ಮಿಕ ಸಭೆಯಲ್ಲ. ಸಾಮಾಜಿಕವಾಗಿ ಶೋಷಣೆಗೊಳಗಾದ ಜನರ ಸಮಾವೇಶವಾಗಿದೆ. ಕಪ್ಪು ಬಾವುಟ ಹಿಡಿದು ಪ್ರತಿಭಟಿಸಲು ನಾವಿಲ್ಲಿ ಬಂದಿಲ್ಲ. ಕಣ್ಣಿನ ಶಸ್ತ್ರಚಿಕಿತ್ಸೆಯ ಕಾರಣಕ್ಕೆ ಕಪ್ಪು ಕನ್ನಡಕ ಧರಿಸಿದ್ದೇನೆ” ಎಂದು ಸ್ಪಷ್ಟಪಡಿಸಿದರು.

ಸಂಕಷ್ಟ ಎದುರಾದಾಗ ಅಲ್ಪಸಂಖ್ಯಾತರು ಒಗ್ಗೂಡುತ್ತಾರೆ ಎಂದ ಅವರು, ಹಿಂದಿನ ಸರ್ಕಾರ ಜಾರಿಗೆ ತಂದ ಮತಾಂತರ ನಿಷೇಧ ಕಾಯ್ದೆಯು ಸಂವಿಧಾನದ 25ನೇ ವಿಧಿಯ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟರು. ಧಾರ್ಮಿಕ ಅಲ್ಪಸಂಖ್ಯಾತರ ಅಸ್ತಿತ್ವವನ್ನೇ ಅಪರಾಧೀಕರಿಸುವ ಇಂತಹ ಕಾಯ್ದೆಯ ಅಗತ್ಯವಿಲ್ಲ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಈಗಾಗಲೇ ಪೊಲೀಸ್ ಕಾಯ್ದೆಗಳಿವೆ. ನಾವು ಈ ದೇಶದ ಎರಡನೇ ದರ್ಜೆಯ ಪ್ರಜೆಗಳಲ್ಲ. ಶಿಕ್ಷಣ ಸಂಸ್ಥೆಗಳು ಹಾಗೂ ಸೇಂಟ್ ಜಾನ್ಸ್‌ನಂತಹ ಆಸ್ಪತ್ರೆಗಳ ಮೂಲಕ ಸಮಾಜದ ಎಲ್ಲ ವರ್ಗಗಳಿಗೂ ಸೇವೆ ಸಲ್ಲಿಸುತ್ತಿದ್ದೇವೆ. ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದಾಗ ಮಾತ್ರ ಮುಂದಿನ ಚುನಾವಣೆಯಲ್ಲಿ ಜನರು ಸರ್ಕಾರವನ್ನು ನಂಬುತ್ತಾರೆ ಎಂದು ಹೇಳಿದರು.

‘ಅಲ್ಪಸಂಖ್ಯಾತರು, ದಲಿತರು ಮತ್ತು ರೈತರಿಗೆ ನೀಡಿದ ಭರವಸೆ ಈಡೇರಿಲ್ಲ’

ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ ಸಂಚಾಲಕ ಯಾಸೀನ್ ಮಲ್ಪೆ ಮಾತನಾಡಿ, ಪಂಚ ಗ್ಯಾರಂಟಿಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಿದ ಸರ್ಕಾರವು ಅಲ್ಪಸಂಖ್ಯಾತರು, ದಲಿತರು ಹಾಗೂ ರೈತರಿಗೆ ನೀಡಿದ ಭರವಸೆಗಳ ವಿಚಾರದಲ್ಲಿ ಅಪ್ರಾಮಾಣಿಕತೆ ತೋರುತ್ತಿದೆ ಎಂದು ಆರೋಪಿಸಿದರು.

ಸಂವಿಧಾನವನ್ನು ಕೈಯಲ್ಲಿ ಹಿಡಿದು ಭಾಷಣ ಮಾಡುವುದಷ್ಟೇ ಮುಖ್ಯವಲ್ಲ. ಅಧಿಕಾರ ಸಿಕ್ಕಾಗ ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಆಡಳಿತ ನಡೆಸಬೇಕು. ನಮ್ಮನ್ನು ಸುಲಭವಾಗಿ ಕಡೆಗಣಿಸಬಹುದು ಎಂದು ಭಾವಿಸಿದರೆ ಅದನ್ನು ಸಹಿಸುವುದಿಲ್ಲ. ಮುಂದಿನ ಹೋರಾಟದ ದಿಕ್ಕಿನ ಬಗ್ಗೆ ಒಟ್ಟಾಗಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಮೀಯತ್ ಉಲಮಾ-ಎ-ಹಿಂದ್ ರಾಜ್ಯ ಉಪಾಧ್ಯಕ್ಷ ಮುಫ್ತಿ ಆರ್. ಮುಹಮ್ಮದ್ ಹುಸೇನ್ ಸಾಬ್ ಮಾತನಾಡಿ, ಒಳ್ಳೆಯ ಮನುಷ್ಯರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ. ಆದರೆ ಕಾಂಗ್ರೆಸ್ ಸರ್ಕಾರ ನಮಗೆ ನ್ಯಾಯ ಒದಗಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಮರು ನೀಡಿದ ತ್ಯಾಗವನ್ನು ಸ್ಮರಿಸಿದ ಅವರು, ಪ್ರಜಾಸತ್ತಾತ್ಮಕವಾಗಿ ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ. ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಮತದಾರರ ಪಟ್ಟಿ ವಿಚಾರವಾಗಿ ಸರ್ಕಾರದ ವಿರುದ್ಧ ಆಕ್ಷೇಪ

ಪ್ರಗತಿಪರ ಚಿಂತಕ ಶಿವಸುಂದರ್ ಮಾತನಾಡಿ, ಕಳೆದ ಮೂರೂವರೆ ವರ್ಷಗಳ ಕಾಂಗ್ರೆಸ್ ಆಡಳಿತವು ವಿಶ್ವಾಸದ್ರೋಹದ ಕಥೆಯಾಗಿದೆ ಎಂದು ಟೀಕಿಸಿದರು.

ಸ್ಥಳೀಯ ಸಂಸ್ಥೆಗಳು ಹಾಗೂ ಜಿಬಿಎ ಚುನಾವಣೆಗಳಿಗೆ ಎಸ್‌ಐಆರ್‌ಗೂ ಮುನ್ನದ ಮತದಾರರ ಪಟ್ಟಿಯನ್ನು ಬಳಸುವುದಾಗಿ ಭರವಸೆ ನೀಡಿದ್ದ ಸರ್ಕಾರ ಈಗ ಎಸ್‌ಐಆರ್ ಪಟ್ಟಿಯನ್ನೇ ಬಳಸಲು ಮುಂದಾಗಿದೆ. ಇದರಿಂದ ರಾಜ್ಯದ ಒಂದು ಕೋಟಿ ಹಾಗೂ ಬೆಂಗಳೂರಿನ 53 ಲಕ್ಷ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಪಟ್ಟಿಯಲ್ಲಿ ಮುಸ್ಲಿಮರು, ಕ್ರೈಸ್ತರು, ದಲಿತರು, ಆದಿವಾಸಿಗಳು, ವಲಸೆ ಕಾರ್ಮಿಕರು ಹಾಗೂ ತೃತೀಯಲಿಂಗಿಗಳು ಸೇರಿದ್ದಾರೆ ಎಂದು ಹೇಳಿದರು.

ಜಾನುವಾರು ಹತ್ಯೆ ನಿಷೇಧ ಕಾಯ್ದೆಯಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರವೂ 1,950 ಪ್ರಕರಣಗಳು ದಾಖಲಾಗಿವೆ. ಅನುಪಯುಕ್ತ ರಾಸುಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.

‘ಮೊಹಬ್ಬತ್ ಕಿ ದುಕಾನ್ ತೆರೆಯಲು ದೃಢ ನಿಲುವು ಬೇಕು’

ಸಿಪಿಐಎಂ ರಾಜ್ಯ ಸಮಿತಿ ಸದಸ್ಯೆ ಕೆ. ನೀಲಾ ಮಾತನಾಡಿ, ರಾಮಮಂದಿರದ ಬೀಗ ತೆಗೆದವರು ಯಾರು ಎಂಬುದನ್ನು ಜನರು ಮರೆತಿಲ್ಲ. ‘ಮೊಹಬ್ಬತ್ ಕಿ ದುಕಾನ್’ ತೆರೆಯುವುದು ಕೇವಲ ಮಾತಿನಿಂದ ಸಾಧ್ಯವಿಲ್ಲ. ಅದಕ್ಕೆ ದೃಢವಾದ ರಾಜಕೀಯ ನಿಲುವು ಅಗತ್ಯ ಎಂದು ಹೇಳಿದರು.

ಸಾಚಾರ್ ವರದಿ ಸಲ್ಲಿಕೆಯಾಗಿ 19 ವರ್ಷ ಕಳೆದರೂ ಮುಸ್ಲಿಮರ ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಯಲ್ಲಿ ನಿರೀಕ್ಷಿತ ಸುಧಾರಣೆಯಾಗಿಲ್ಲ. ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ವಾಪಸ್ ಪಡೆಯುತ್ತಿಲ್ಲ ಎಂದು ಟೀಕಿಸಿದರು. ಮೈಸೂರಿನ ಪೊಲೀಸ್ ಠಾಣೆಗೆ ನುಗ್ಗಿದ ಮಾಜಿ ಸಂಸದರ ಹೆಸರನ್ನು ಆರೋಪಪಟ್ಟಿಯಿಂದ ಕೈಬಿಡುವ ಮೂಲಕ ಒಳಒಪ್ಪಂದ ಮಾಡಿಕೊಳ್ಳಲಾಗಿದೆ ಎಂದೂ ಆರೋಪಿಸಿದರು.

‘ಕೊಟ್ಟ ಮಾತು ಉಳಿಸಿಕೊಳ್ಳದವರನ್ನು ವಚನಭ್ರಷ್ಟರು ಎನ್ನಬೇಕಾಗುತ್ತದೆ’

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಕೊಟ್ಟ ಮಾತನ್ನು ಉಳಿಸಿಕೊಳ್ಳದವರನ್ನು ವಚನಭ್ರಷ್ಟರು ಎನ್ನಬೇಕಾಗುತ್ತದೆ ಎಂದು ಹೇಳಿದರು.

ಬುದ್ಧನ ಕಥೆಯನ್ನು ಉಲ್ಲೇಖಿಸಿದ ಅವರು, ಅನ್ಯಾಯದ ವಿರುದ್ಧ ಮೌನವಾಗಿದ್ದರೆ ಉಳಿಗಾಲವಿಲ್ಲ ಎಂದರು. 1935ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಮತಾಂತರ ಎಂಬುದು ಮನುಷ್ಯನ ಘನತೆ ಮತ್ತು ಆಯ್ಕೆಯ ಪ್ರಶ್ನೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 800 ದಲಿತರ ಕೊಲೆಗಳಾಗಿವೆ ಎಂದು ಆರೋಪಿಸಿದ ಅವರು, ಈ ವಿಚಾರವಾಗಿಯೂ ಧ್ವನಿ ಎತ್ತಬೇಕಿದೆ ಎಂದರು.

ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದತಿಗೆ ರೈತರ ಆಗ್ರಹ

ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ವೀರಸಂಗಯ್ಯ ಮಾತನಾಡಿ, ರಾಜ್ಯದ 87 ಲಕ್ಷ ರೈತ ಕುಟುಂಬಗಳ ಪೈಕಿ 69 ಲಕ್ಷ ಸಣ್ಣ ರೈತರು ಹೈನುಗಾರಿಕೆಯನ್ನೇ ನಂಬಿದ್ದಾರೆ. ಹಾಲು ನೀಡುವುದನ್ನು ನಿಲ್ಲಿಸಿದ ರಾಸುಗಳನ್ನು ಮಾರಾಟ ಮಾಡಿದರೆ 20ರಿಂದ 25 ಸಾವಿರ ರೂಪಾಯಿ ಸಿಗುತ್ತಿತ್ತು. ಆದರೆ ಕಾಯ್ದೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ಕಾರ್ಪೊರೇಟ್ ಡೈರಿಗಳಿಗೆ ಅನುಕೂಲ ಮಾಡಿಕೊಡುವ ಹಾಗೂ ಮಾಂಸ ಮತ್ತು ಚರ್ಮೋದ್ಯಮವನ್ನು ನಾಶಪಡಿಸುವ ಉದ್ದೇಶದಿಂದ ಈ ಕಾಯ್ದೆ ತರಲಾಗಿದೆ ಎಂದು ಆರೋಪಿಸಿದರು. ಮುಂಬರುವ ಬೆಳಗಾವಿ ಅಧಿವೇಶನದಲ್ಲೇ ಕಾಯ್ದೆಯನ್ನು ರದ್ದುಗೊಳಿಸದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಸಿಪಿಐಎಂಎಲ್ ಲಿಬರೇಷನ್ ರಾಜ್ಯ ಕಾರ್ಯದರ್ಶಿ, ನ್ಯಾಯವಾದಿ ಕ್ಲಿಪ್ಟನ್ ರೊಝಾರಿಯೊ ಮಾತನಾಡಿ, ಅಲ್ಪಸಂಖ್ಯಾತರು ಬೇರೆ ಎಲ್ಲಿಗೂ ಹೋಗುವುದಿಲ್ಲ ಎಂಬ ರಾಜಕೀಯ ಅಹಂಕಾರದಿಂದ ಕಾಂಗ್ರೆಸ್ ಹೊರಬರಬೇಕು ಎಂದರು. ಮೇ 22ರಂದು ಕೂಲಿ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಆದೇಶ ಹೊರಡಿಸಿದ್ದರೂ ಸರ್ಕಾರ ಅದನ್ನು ಇನ್ನೂ ಜಾರಿಗೊಳಿಸಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ದಲಿತರ ಮೇಲಿನ ಅಸ್ಪೃಶ್ಯತೆ ಮತ್ತು ಸಾಮಾಜಿಕ ಬಹಿಷ್ಕಾರ ಮುಂದುವರಿದಿದೆ ಎಂದು ಹೇಳಿದರು.

ಜನಶಕ್ತಿ ಸಂಚಾಲಕಿ ಮಲ್ಲಿಗೆ ಮಾತನಾಡಿ, ಸರ್ಕಾರ ಚುನಾವಣಾ ಭರವಸೆಗಳನ್ನು ಮರೆತಿಲ್ಲ, ಬದಲಾಗಿ ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿದೆ ಎಂದು ಟೀಕಿಸಿದರು. ದ್ವೇಷ ಭಾಷಣಗಳಿಂದ ಉಂಟಾಗುವ ಗಲಭೆಗಳಿಗೆ ಬಡವರ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

2ಬಿ ಮೀಸಲಾತಿ ಮರುಸ್ಥಾಪನೆಗೆ ಆಗ್ರಹ

ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಮಾತನಾಡಿ, ಮಿಲ್ಲರ್ ಆಯೋಗದಿಂದ ಹಿಡಿದು ಚಿನ್ನಪ್ಪ ರೆಡ್ಡಿ ಆಯೋಗದವರೆಗೆ ಹಿಂದುಳಿದ ವರ್ಗಗಳ ಅಧ್ಯಯನದ ಆಧಾರದ ಮೇಲೆ ಮುಸ್ಲಿಮರಿಗೆ 2ಬಿ ಅಡಿಯಲ್ಲಿ ಶೇ.4ರಷ್ಟು ಮೀಸಲಾತಿ ನೀಡಲಾಗಿತ್ತು. ಇದು ಧರ್ಮಾಧಾರಿತ ಮೀಸಲಾತಿಯಲ್ಲ ಎಂದು ಹೇಳಿದರು.

2023ರ ಏಪ್ರಿಲ್ 24ರಂದು ಅಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣದ ಇತ್ಯರ್ಥಕ್ಕೆ ಹಿಂದಿನ ಸರ್ಕಾರದ ಆದೇಶವನ್ನು ಹಿಂಪಡೆಯುವ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಪ್ರಣಾಳಿಕೆಯನ್ನು ಮತ್ತೊಮ್ಮೆ ಪರಿಶೀಲಿಸಿ ಸರ್ಕಾರವನ್ನು ಸರಿದಾರಿಗೆ ತರಬೇಕು ಎಂದು ಒತ್ತಾಯಿಸಿದರು. ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಆನೇಕಲ್‌ನಲ್ಲಿ ಮಾಂಸ ಹಾಗೂ ಮೀನು ಮಾರಾಟ ನಿಷೇಧಿಸಿರುವುದನ್ನೂ ಖಂಡಿಸಿದರು.

ಪಿಯುಸಿಎಲ್ ಸಂಚಾಲಕ ಬಸವರಾಜ ಕೌತಾಳ್ ಮಾತನಾಡಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಈ ಹಕ್ಕೊತ್ತಾಯಗಳ ಕುರಿತು ಸರ್ಕಾರದ ನಿಲುವನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಸಮಾವೇಶದಲ್ಲಿ ಐದು ಪ್ರಮುಖ ನಿರ್ಣಯಗಳ ಅಂಗೀಕಾರ

ಸಮಾವೇಶದ ಕೊನೆಯಲ್ಲಿ ಕೆ.ಆರ್. ಸುಹೈಲ್ ಅಹ್ಮದ್ ಅವರು ಐದು ನಿರ್ಣಯಗಳನ್ನು ಮಂಡಿಸಿದರು. ದೆಹಲಿಯಲ್ಲಿ ರಾಹುಲ್ ಗಾಂಧಿ ಸಂವಿಧಾನ ಉಳಿವಿಗಾಗಿ ಹೋರಾಡುತ್ತಿದ್ದರೆ, ಕರ್ನಾಟಕದಲ್ಲಿ ಅಲ್ಪಸಂಖ್ಯಾತರೇ ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯ ತಿದ್ದುಪಡಿಯನ್ನು ರದ್ದುಗೊಳಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಸರ್ಕಾರದ ಕ್ರಮಕ್ಕಾಗಿ ಕಾದು ನೋಡುವುದರ ಜೊತೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.

ಸಮಾವೇಶದಲ್ಲಿ ಅಂಗೀಕರಿಸಲಾದ ಐದು ಪ್ರಮುಖ ನಿರ್ಣಯಗಳು ಹೀಗಿವೆ:

  1. ಮತಾಂತರ ನಿಷೇಧ ಕಾಯ್ದೆ ರದ್ದು: 2022ರಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಿ, ಈ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು.
  2. ದ್ವೇಷ ಭಾಷಣಗಳ ವಿರುದ್ಧ ಕ್ರಮ: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ದ್ವೇಷ ಭಾಷಣಗಳ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು.
  3. ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದು: 2020ರ ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಿ, ಗುಂಪು ಹಲ್ಲೆ ತಡೆಗೆ ತೆಹಸೀನ್ ಪೂನಾವಾಲಾ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೊಳಿಸಬೇಕು.
  4. ಮೀಸಲಾತಿ ಮರುಸ್ಥಾಪನೆ: ಅರ್ಹ ಮುಸ್ಲಿಮರಿಗೆ 2ಬಿ ಮೀಸಲಾತಿಯನ್ನು ಮರುಸ್ಥಾಪಿಸಬೇಕು. ಕ್ರೈಸ್ತ ಸಮುದಾಯಕ್ಕೆ ಒಬಿಸಿ ಪಟ್ಟಿಯಲ್ಲಿ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು.
  5. ಕಾಲಮಿತಿಯೊಳಗೆ ಅನುಷ್ಠಾನ: ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳು ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.

ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಈ ಬೇಡಿಕೆಗಳ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಸಮಾವೇಶದಲ್ಲಿ ಭಾಗವಹಿಸಿದ್ದ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *