ದುಡಿಮೆಯ ಅರ್ಧದಷ್ಟು ಹಣ ಆಟೋ ರಿಪೇರಿಗೆ ಖರ್ಚು: ಚಾಲಕರಿಗೆ ತಪ್ಪದ ಸಂಕಷ್ಟ
ಸುಂಟಿಕೊಪ್ಪ: ಏಳನೇ ಹೊಸಕೋಟೆಯಿಂದ ಕಲ್ಲೂರು ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಹೊಂಡಗುಂಡಿಗಳಿಂದ ಆವೃತವಾಗಿದ್ದು, ದಿನನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.


ದಿನವಿಡೀ ದುಡಿದು ಜೀವನ ಸಾಗಿಸುವ ಆಟೋ ಚಾಲಕರಿಗೆ ಈ ರಸ್ತೆ ಶಾಪವಾಗಿ ಪರಿಣಮಿಸಿದೆ. ಪ್ರಯಾಣಿಕರನ್ನು ಸಾಗಿಸಿ ದುಡಿದ ಹಣದ ಬಹುಪಾಲು ಆಟೋ ರಿಕ್ಷಾಗಳ ದುರಸ್ತಿಗಾಗಿಯೇ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.
ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ
ಈ ಮಾರ್ಗದಲ್ಲಿ ಪ್ರತಿದಿನ ನೂರಾರು ವಾಹನಗಳು ಹಾಗೂ ಶಾಲಾ ವಾಹನಗಳು ಸಂಚರಿಸುತ್ತವೆ. ಏಳನೇ ಹೊಸಕೋಟೆ–ಕಲ್ಲೂರು ರಸ್ತೆ ಸುಮಾರು ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ.


ಅಲ್ಲದೆ, ನಾಕೂರು ಶಿರಂಗಾಲ, ಕಾನ್ಬೈಲು, ಹೆರೂರು ಮಾರ್ಗವಾಗಿ ಬಸವನಹಳ್ಳಿಯನ್ನು ಸಂಪರ್ಕಿಸಿ ಕುಶಾಲನಗರಕ್ಕೆ ತೆರಳಲು ಕೂಡ ಈ ರಸ್ತೆಯು ಪ್ರಮುಖ ಸಂಪರ್ಕ ಮಾರ್ಗವಾಗಿದೆ.
ಹೊಸಕೋಟೆ ಜಂಕ್ಷನ್ನಲ್ಲಿ ಬಸ್ಸಿನಿಂದ ಇಳಿಯುವ ಪ್ರಯಾಣಿಕರು ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಅಂದಗೋವ ಪೈಸಾರಿ ಪ್ರದೇಶಕ್ಕೆ ತೆರಳಲು ಸ್ಥಳೀಯ ಆಟೋ ರಿಕ್ಷಾಗಳನ್ನೇ ಅವಲಂಬಿಸಿದ್ದಾರೆ.


ಮಳೆಗಾಲದಲ್ಲಿ ಸಂಚಾರ ದುಸ್ತರ: ರೋಗಿಗಳನ್ನು ಸಾಗಿಸಲೂ ಪರದಾಟ
ರಸ್ತೆಯುದ್ದಕ್ಕೂ ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಹೊಂಡಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ವಾಹನ ಸವಾರರಿಗೆ ರಸ್ತೆ ಗುಂಡಿಗಳ ಆಳ ತಿಳಿಯದೆ ಸಂಚರಿಸುವುದು ಅಪಾಯಕಾರಿಯಾಗಿದೆ.
ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಈ ರಸ್ತೆಯ ಮೂಲಕ ಆಸ್ಪತ್ರೆಗೆ ಕರೆದೊಯ್ಯುವುದೂ ಕಷ್ಟಕರವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ರಸ್ತೆಯ ದುಸ್ಥಿತಿಯಿಂದಾಗಿ ಆಟೋ ರಿಕ್ಷಾಗಳು ಪದೇಪದೇ ದುರಸ್ತಿಗೆ ಬರುತ್ತಿದ್ದು, ತಿಂಗಳಿಗೊಮ್ಮೆಯಾದರೂ ಗ್ಯಾರೇಜ್ಗೆ ಕೊಂಡೊಯ್ಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಆಟೋ ಚಾಲಕರು ತಮ್ಮ ಅಳಲನ್ನು ‘ಕೂರ್ಗ್ ಮಿರರ್ ನ್ಯೂಸ್’ನೊಂದಿಗೆ ಹಂಚಿಕೊಂಡಿದ್ದಾರೆ.


ಡಾಂಬರೀಕರಣದ ಭರವಸೆ ಈಡೇರಿಲ್ಲ: ಆಟೋ ಚಾಲಕ ಅಬ್ದುಲ್ಲ ಅಳಲು
ಈ ಕುರಿತು ಮಾತನಾಡಿದ ಸ್ಥಳೀಯ ಆಟೋ ಚಾಲಕ ಅಬ್ದುಲ್ಲ ಅವರು, “ಕಳೆದ ಹಲವು ವರ್ಷಗಳಿಂದ ನಾವು ಈ ರಸ್ತೆಯ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಕೆಲವು ದಿನಗಳ ಹಿಂದೆ ರಸ್ತೆಯ ಡಾಂಬರೀಕರಣ ಕಾಮಗಾರಿ ನಡೆಯಲಿದೆ ಎಂಬ ಮಾಹಿತಿ ಕೇಳಿಬಂದಿತ್ತು. ಆದರೆ ಈವರೆಗೂ ಯಾವುದೇ ದುರಸ್ತಿ ಕಾಮಗಾರಿ ಆರಂಭವಾಗಿಲ್ಲ.
ನಮ್ಮ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು, ಅವರ ಮೇಲೆ ನಮಗೆ ಅಪಾರ ನಂಬಿಕೆಯಿದೆ. ಆದಷ್ಟು ಶೀಘ್ರದಲ್ಲಿ ಈ ರಸ್ತೆಯ ಸಮಸ್ಯೆಯ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ನಮ್ಮ ನೋವಿಗೆ ಸ್ಪಂದಿಸಬೇಕು” ಎಂದು ಮನವಿ ಮಾಡಿದ್ದಾರೆ.


ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸುವರೇ?
ಒಟ್ಟಿನಲ್ಲಿ, ಹಲವು ಗ್ರಾಮಗಳ ಜನರು, ಶಾಲಾ ಮಕ್ಕಳು, ವಾಹನ ಸವಾರರು ಹಾಗೂ ಆಟೋ ಚಾಲಕರು ಪ್ರತಿನಿತ್ಯ ಅವಲಂಬಿಸಿರುವ ಈ ರಸ್ತೆಯ ದುಸ್ಥಿತಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಅಗತ್ಯವಾಗಿದೆ.
ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಹಾಗೂ ಜನಪ್ರತಿನಿಧಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ರಸ್ತೆ ದುರಸ್ತಿ ಅಥವಾ ಡಾಂಬರೀಕರಣ ಕಾಮಗಾರಿಯನ್ನು ಆರಂಭಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.





