ಹೊಸ ಭತ್ತದ ಕದಿರನ್ನು ಮನೆಗೆ ತರುವ ಸಂಪ್ರದಾಯಕ್ಕೆ ಸಾಕ್ಷಿಯಾಗಲಿರುವ ಕೊಡಗು
ಕೊಡಗು: ಜಿಲ್ಲೆಯಾದ್ಯಂತ ಇಂದು ಕೊಡವರ ಸಾಂಪ್ರದಾಯಿಕ ಸುಗ್ಗಿ ಹಬ್ಬವಾದ ಪುತ್ತರಿ ಸಂಭ್ರಮ ಮನೆಮಾಡಿದೆ. ಹೊಸ ಭತ್ತದ ಬೆಳೆಯನ್ನು ಮನೆಗೆ ತಂದು ಪೂಜಿಸುವ ಮೂಲಕ ಆಚರಿಸಲಾಗುವ ಈ ಹಬ್ಬ ಕೊಡಗಿನ ಕೃಷಿ ಸಂಸ್ಕೃತಿ, ಸಂಪ್ರದಾಯ ಹಾಗೂ ಕುಟುಂಬದ ಒಗ್ಗಟ್ಟಿನ ಪ್ರತೀಕವಾಗಿದೆ.
ಪುತ್ತರಿ ಹಬ್ಬದ ಪ್ರಮುಖ ಆಚರಣೆಯಾದ ಕದಿರು ತೆಗೆಯುವ ಸಂದರ್ಭದಲ್ಲಿ ಗದ್ದೆಯಿಂದ ಹೊಸ ಭತ್ತದ ಕದಿರನ್ನು ಕೊಯ್ದು, “ಪೊಲಿ ಪೊಲಿ ದೇವಾ!” ಎಂಬ ಘೋಷಣೆಯೊಂದಿಗೆ ಮನೆಗೆ ತಂದು ಕಟ್ಟಲಾಗುತ್ತದೆ. ನವೆಂಬರ್ ಅಂತ್ಯದಿಂದ ಡಿಸೆಂಬರ್ ತಿಂಗಳೊಳಗೆ ಬರುವ ಹುಣ್ಣಿಮೆಯಂದು ರೋಹಿಣಿ ಅಥವಾ ಕೃತಿಕಾ ನಕ್ಷತ್ರದ ಸಂದರ್ಭದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯುವ ಪುತ್ತರಿ ಆಚರಣೆಗೆ ವಿಶೇಷ ಮಹತ್ವವಿದೆ.


ಸಾಂಪ್ರದಾಯಿಕ ಆಹಾರಕ್ಕೆ ವಿಶೇಷ ಮಹತ್ವ
ಪುತ್ತರಿ ಹಬ್ಬದ ಸಂದರ್ಭದಲ್ಲಿ ಪಿತೃಗಳಿಗೆ ‘ಏಳಕ್ಕಿ ಪುಟ್ಟ್’ ಅರ್ಪಿಸುವುದು ಸಂಪ್ರದಾಯವಾಗಿದೆ. ಬಳಿಕ ಪಾಯಸ ಹಾಗೂ ತಂಬುಟ್ಟನ್ನು ಸವಿದು ಹಬ್ಬವನ್ನು ಸಂಭ್ರಮಿಸಲಾಗುತ್ತದೆ. ಕೋಲಾಟ, ಪರಿಯಕಳಿ ಸೇರಿದಂತೆ ವಿವಿಧ ಜಾನಪದ ನೃತ್ಯಗಳು ಹಾಗೂ ‘ಊರೊರ್ಮೆ’ ಸಾಮೂಹಿಕ ಭೋಜನ ಹಬ್ಬದ ವಿಶೇಷ ಆಕರ್ಷಣೆಯಾಗಿವೆ.


ಎರಡು ದಿನಗಳ ಸಂಭ್ರಮ
ಪುತ್ತರಿ ಹಬ್ಬವನ್ನು ‘ಪಾಡಿ ಪೊಳ್ದ್’ ಮತ್ತು ‘ನಾಡ್ ಪೊಳ್ದ್’ ಎಂಬ ಎರಡು ಹಂತಗಳಲ್ಲಿ ಆಚರಿಸಲಾಗುತ್ತದೆ. ಮೊದಲ ದಿನ ಪಾಡಿಯ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಗದ್ದೆಯಿಂದ ಭತ್ತದ ಕದಿರನ್ನು ತರುವ ಆಚರಣೆ ನಡೆಯುತ್ತದೆ. ಮರುದಿನ ಕೊಡಗಿನಾದ್ಯಂತ ಕೊಡವರು ತಮ್ಮ ಗದ್ದೆಗಳಿಂದ ಕದಿರನ್ನು ಕೊಯ್ದು ಮನೆಗೆ ತರುವ ಸಂಪ್ರದಾಯವನ್ನು ‘ನಾಡ್ ಪೊಳ್ದ್’ ಎಂದು ಕರೆಯಲಾಗುತ್ತದೆ.
ಹುಣ್ಣಿಮೆಯ ರಾತ್ರಿ ರೋಹಿಣಿ ನಕ್ಷತ್ರವಿರುವ ಸಂದರ್ಭದಲ್ಲಿ ಕದಿರು ತೆಗೆಯುವುದು ಶುಭಕರವೆಂಬ ನಂಬಿಕೆಯಿದೆ. ರೋಹಿಣಿ ನಕ್ಷತ್ರವಿಲ್ಲದಿದ್ದರೆ ಕೃತಿಕಾ ನಕ್ಷತ್ರವನ್ನೂ ಶುಭವೆಂದು ಪರಿಗಣಿಸಲಾಗುತ್ತದೆ.


ಐನ್ ಮನೆಯಲ್ಲಿ ಕುಟುಂಬಸ್ಥರ ಸಮ್ಮಿಲನ
ಪುತ್ತರಿ ಹಬ್ಬದ ಅಂಗವಾಗಿ ಕೊಡಗಿನಾದ್ಯಂತ ವಿವಿಧ ಜಾನಪದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳಲು ತಮ್ಮ ಐನ್ ಮನೆಗೆ ಆಗಮಿಸುವುದು ಸಂಪ್ರದಾಯವಾಗಿದೆ. ಮನೆತನಕ್ಕೆ ಸೇರಿದ ಆಳುಕಾಳುಗಳು ಹಾಗೂ ಮೇಯಲು ದೂರದ ಪ್ರದೇಶಗಳಿಗೆ ಬಿಟ್ಟಿರುವ ದನಕರುಗಳೂ ಪುತ್ತರಿಯ ಸಂದರ್ಭದಲ್ಲಿ ಐನ್ ಮನೆಯಲ್ಲಿ ಸೇರಬೇಕು ಎಂಬ ಕಟ್ಟಳೆಯಿದೆ.
ಕೃಷಿ ಪರಂಪರೆ, ಹಿರಿಯರ ಸ್ಮರಣೆ, ಕುಟುಂಬದ ಒಗ್ಗಟ್ಟು ಮತ್ತು ಸಾಂಸ್ಕೃತಿಕ ವೈಭವವನ್ನು ಸಾರುವ ಪುತ್ತರಿ ಹಬ್ಬ ಕೊಡವ ಸಮುದಾಯದ ಪ್ರಮುಖ ಆಚರಣೆಯಾಗಿದ್ದು, ಜಿಲ್ಲೆಯಾದ್ಯಂತ ಹಬ್ಬದ ಸಂಭ್ರಮ ಕಳೆಗಟ್ಟಿದೆ.







