✍️ರಿಯಾಜ್ ಕಟ್ಟೆಕ್ಕಾರ್ಸ್

ಸುಳ್ಯ: ಮಾಹಿತಿ ಹಕ್ಕು ಕಾಯ್ದೆ (RTI) ಮೂಲಕ ಸಾರ್ವಜನಿಕ ಸಮಸ್ಯೆಗಳನ್ನು ಬೆಳಕಿಗೆ ತಂದು, ಜನರ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿದ್ದ ಸುಳ್ಯದ ಹಳಗೆಟು ಮೂಲದ ಶಾರಿಕ್ D.M. ಅವರು ನಿಧನರಾಗಿರುವುದು ಅತ್ಯಂತ ದುಃಖಕರ.

ಶಾರಿಕ್ ಅವರು ಕೇವಲ ಮಾಹಿತಿ ಹಕ್ಕು ಕಾರ್ಯಕರ್ತರಾಗಿರದೆ, ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಕಾಳಜಿ ಹೊಂದಿದ್ದ ಹೋರಾಟಗಾರರಾಗಿದ್ದರು. ಸುಳ್ಯದಲ್ಲಿ 110 ಕೆ.ವಿ. ವಿದ್ಯುತ್ ಉಪಕೇಂದ್ರ ಸ್ಥಾಪನೆಯ ವಿಳಂಬ, ರಸ್ತೆ ಅಗಲೀಕರಣಕ್ಕೆ ಭೂಮಿ ನೀಡಿದವರಿಗೆ ಪರಿಹಾರ ಹಣ ಬಿಡುಗಡೆ ವಿಳಂಬ, ಒಳಾಂಗಣ ಕ್ರೀಡಾಂಗಣದ ಬೇಡಿಕೆ ಹಾಗೂ ರಸ್ತೆ ಕಾಮಗಾರಿಗಳ ಗುಣಮಟ್ಟದಂತಹ ಹಲವು ಸಾರ್ವಜನಿಕ ವಿಚಾರಗಳಲ್ಲಿ ಧ್ವನಿ ಎತ್ತಿದ್ದರು.

2016ರ ಏಪ್ರಿಲ್ 23ರಂದು ಪ್ರಕಟವಾದ ಪತ್ರಿಕಾ ವರದಿಯ ಪ್ರಕಾರ, ಸುಳ್ಯದ 110 ಕೆ.ವಿ. ವಿದ್ಯುತ್ ಉಪಕೇಂದ್ರದ ವಿಚಾರವಾಗಿ ಪ್ರಧಾನಮಂತ್ರಿಗಳ ಕಚೇರಿಗೂ ದಾಖಲೆಗಳ ಸಹಿತ ದೂರು ಸಲ್ಲಿಸಿದ್ದರು. ರಸ್ತೆ ಪರಿಹಾರ ಹಣದ ವಿಳಂಬದ ವಿಚಾರವನ್ನೂ ಲೋಕಾಯುಕ್ತರ ಗಮನಕ್ಕೆ ತಂದಿದ್ದರು.

ಸಾರ್ವಜನಿಕ ಸಮಸ್ಯೆಗಳನ್ನು ಕಂಡಾಗ ಮೌನವಾಗಿರದೆ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಪ್ರಯತ್ನಿಸುವ ಅವರ ಮನೋಭಾವ ಸಮಾಜಕ್ಕೆ ಮಾದರಿಯಾಗಿತ್ತು.

ಇಂದು ಅವರು ನಮ್ಮೊಂದಿಗಿಲ್ಲ. ಆದರೆ ಸಾರ್ವಜನಿಕ ಹಿತಾಸಕ್ತಿಗಾಗಿ ಅವರು ಎತ್ತಿದ ಪ್ರಶ್ನೆಗಳು, ನಡೆಸಿದ ಹೋರಾಟಗಳು ಮತ್ತು ಜನಪರ ಕಾಳಜಿ ನೆನಪಿನಲ್ಲಿ ಉಳಿಯಲಿವೆ.

ಒಬ್ಬ ಜನಪರ ಹೋರಾಟಗಾರನ ಅಗಲಿಕೆ ಸುಳ್ಯಕ್ಕೆ ನೋವು ತಂದಿದೆ. ಅವರ ಕುಟುಂಬದವರು, ಬಂಧುಗಳು ಹಾಗೂ ಸ್ನೇಹಿತರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ.

ರಿಯಾಜ್ ಕಟ್ಟೆಕ್ಕಾರ್
ಮಾಜಿ ಸದಸ್ಯರು, ನಗರ ಪಂಚಾಯತ್,ಸುಳ್ಯ
✍️

Leave a Reply

Your email address will not be published. Required fields are marked *