ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ಏಕವಚನದಲ್ಲಿ ಮಾತನಾಡಿ ವಿವಾದಕ್ಕೆ ಕಾರಣವಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಕಾಂಗ್ರೆಸ್ ನಾಯಕರ ತೀವ್ರ ಆಕ್ಷೇಪ, ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ ಹಾಗೂ ಬೆಂಗಳೂರಿನಲ್ಲಿ ನಡೆದ ಪೋಸ್ಟರ್ ಅಭಿಯಾನದ ಬೆನ್ನಲ್ಲೇ ವಿಜಯೇಂದ್ರ ಈ ಸ್ಪಷ್ಟನೆ ನೀಡಿದ್ದಾರೆ. ‘ನಾನು ಉದ್ದೇಶಪೂರ್ವಕವಾಗಿ ಆ ಪದಗಳನ್ನು ಬಳಸಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ’ ಎಂದು ಹೇಳಿದ್ದಾರೆ.
‘ಈ ನನ್ನ ಮಕ್ಕಳು ಕಾಂಗ್ರೆಸ್‌ನವರು ಇದ್ದಾರಲ್ಲಾ’ ಎಂದಿದ್ದ ವಿಜಯೇಂದ್ರ!
ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳ ಕಾಯ್ದೆಯನ್ನು ಹೈಕೋರ್ಟ್ ರದ್ದುಪಡಿಸಿರುವ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ವಿಜಯೇಂದ್ರ, ‘ಈ ನನ್ನ ಮಕ್ಕಳು ಕಾಂಗ್ರೆಸ್‌ನವರು ಇದ್ದಾರಲ್ಲಾ…’ ಎಂದು ಏಕವಚನದಲ್ಲಿ ಮಾತನಾಡಿದ್ದರು. ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಕೂಡ ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದು, ಮೂರು ದಿನಗಳ ಒಳಗಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು.
‘ಉದ್ದೇಶಪೂರ್ವಕವಾಗಿ ಆ ಪದ ಬಳಸಿಲ್ಲ’: ವಿಜಯೇಂದ್ರ ಸ್ಪಷ್ಟನೆ
ವಿವಾದ ತೀವ್ರಗೊಳ್ಳುತ್ತಿದ್ದಂತೆ ಪ್ರತಿಕ್ರಿಯಿಸಿರುವ ವಿಜಯೇಂದ್ರ, ದಾವಣಗೆರೆಯಲ್ಲಿ ಮಾತನಾಡುವಾಗ ಕೆಲವು ಪದಗಳನ್ನು ಬಳಸಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.
‘ನಾನು ದಾವಣಗೆರೆಯಲ್ಲಿ ಮಾತನಾಡುವಾಗ ಕೆಲವು ಪದಗಳನ್ನು ಬಳಸಿರುವುದು ನಿಜ. ಅದನ್ನು ಒಪ್ಪಿಕೊಳ್ಳುತ್ತೇನೆ. ಕಾಂಗ್ರೆಸ್‌ನವರಿಗೆ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಆದರೆ, ಯಾರನ್ನಾದರೂ ಉದ್ದೇಶಪೂರ್ವಕವಾಗಿ ಅವಮಾನಿಸಬೇಕು ಎಂಬ ಆಲೋಚನೆಯಿಂದ ಆ ಪದಗಳನ್ನು ಬಳಸಿಲ್ಲ. ಮೀಸಲಾತಿ ಮತ್ತು ಕೆಪಿಎಸ್‌ಸಿ ವಿಚಾರವಾಗಿ ಮಾತನಾಡುವಾಗ ಆಡುಭಾಷೆಯಲ್ಲಿ ಆ ಪದ ಬಂದಿದೆ. ಬೇರೆ ಯಾವುದೇ ದುರುದ್ದೇಶ ಇರಲಿಲ್ಲ’ ಎಂದು ವಿಜಯೇಂದ್ರ ತಿಳಿಸಿದ್ದಾರೆ.
ಯಡಿಯೂರಪ್ಪ ನಿವಾಸದ ಬಳಿ ‘RTGS ಚೋರ್’ ಪೋಸ್ಟರ್!
ಇನ್ನೊಂದೆಡೆ, ವಿಜಯೇಂದ್ರ ಹೇಳಿಕೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಪೋಸ್ಟರ್ ಅಭಿಯಾನ ನಡೆಸಿದ್ದರು. ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ನಿವಾಸದ ಸುತ್ತಮುತ್ತ ಪೋಸ್ಟರ್‌ಗಳನ್ನು ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
‘RTGS ಚೋರ್ ಬಿ.ವೈ. ವಿಜಯೇಂದ್ರ’ ಹಾಗೂ ‘ನೀನು ಹೇಡಿ, RTGS ಕೇಡಿ’ ಎಂಬ ಬರಹಗಳಿರುವ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು.
ಕಾಂಗ್ರೆಸ್ ನಾಯಕರ ಆಕ್ಷೇಪ, ಪೋಸ್ಟರ್ ಅಭಿಯಾನ ಹಾಗೂ ರಾಜಕೀಯ ವಾಕ್ಸಮರದ ನಡುವೆ ಇದೀಗ ವಿಜಯೇಂದ್ರ ಕ್ಷಮೆಯಾಚಿಸಿರುವುದು ರಾಜ್ಯ ರಾಜಕೀಯದಲ್ಲಿ ಗಮನ ಸೆಳೆದಿದೆ.
