ಬೆಂಗಳೂರು: ಪ್ರೀತಿಸಿ ಮದುವೆಯಾಗುವ ಕನಸು ಕಂಡಿದ್ದ ಯುವತಿಯನ್ನು ಲಾಡ್ಜ್ನ ಮೂರನೇ ಮಹಡಿಯಿಂದ ತಳ್ಳಿ ಹತ್ಯೆಗೈದ ಆರೋಪದಡಿ ಆಕೆಯ ಪ್ರಿಯಕರನನ್ನು ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಸನ ಮೂಲದ ಐಶ್ವರ್ಯಾ (23) ಮೃತಪಟ್ಟ ಯುವತಿ. ಪ್ರಕರಣದ ಆರೋಪಿ ಸಂತೋಷ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನವೆಂಬರ್ 19ರಂದು ಅಬ್ಬಿಗೆರೆ ಸರ್ಕಲ್ನಲ್ಲಿರುವ ಲಾಡ್ಜ್ನಲ್ಲಿ ಈ ಘಟನೆ ನಡೆದಿತ್ತು. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಐಶ್ವರ್ಯಾ, ಅಂದು ತನ್ನ ಪ್ರಿಯಕರ ಸಂತೋಷ್ನೊಂದಿಗೆ ಲಾಡ್ಜ್ಗೆ ತೆರಳಿದ್ದಳು. ಮಧ್ಯಾಹ್ನ ಇಬ್ಬರೂ ರೂಮ್ ಪಡೆದಿದ್ದರು. ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಇಬ್ಬರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಐಶ್ವರ್ಯಾ ಲಾಡ್ಜ್ನ ಮೂರನೇ ಮಹಡಿಯ ಕಿಟಕಿಯಿಂದ ಕೆಳಕ್ಕೆ ಬಿದ್ದಿದ್ದಳು. ವಿದ್ಯುತ್ ಕಂಬದ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.
ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುತ್ತಿದ್ದರು. ಈ ನಡುವೆ ಯುವತಿಯ ತಂದೆ ನೀಡಿದ ದೂರಿನ ಬಳಿಕ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಗಲಾಟೆಯ ಸಂದರ್ಭದಲ್ಲಿ ಸಂತೋಷ್ ಯುವತಿಯನ್ನು ಕಿಟಕಿಯಿಂದ ಹೊರಕ್ಕೆ ತಳ್ಳಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಹತ್ಯೆ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ.


ಮೂರು ವರ್ಷಗಳ ಪ್ರೀತಿ, ಮದುವೆ ವಿಚಾರಕ್ಕೆ ಮನಸ್ತಾಪ
ಐಶ್ವರ್ಯಾ ಹಾಗೂ ಸಂತೋಷ್ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆರಂಭದಲ್ಲಿ ಈ ಪ್ರೀತಿಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರೂ, ಸಂತೋಷ್ನನ್ನೇ ಮದುವೆಯಾಗುವುದಾಗಿ ಐಶ್ವರ್ಯಾ ಪಟ್ಟು ಹಿಡಿದಿದ್ದಳು. ಕೊನೆಗೆ ಕುಟುಂಬಸ್ಥರು ಮದುವೆಗೆ ಒಪ್ಪಿಗೆ ಸೂಚಿಸಿದ್ದರು.
ಆದರೆ, ಮದುವೆ ವಿಚಾರ ಬಂದಾಗ ಸಂತೋಷ್ ಮೂರು ವರ್ಷಗಳ ಕಾಲಾವಕಾಶ ಕೇಳಿದ್ದ. ಮೂರು ವರ್ಷ ಕಳೆದರೂ ಮದುವೆಯಾಗದೆ ಸತಾಯಿಸಿದ್ದ ಆತ, ಬಳಿಕ ಮನೆಯವರು ಒಪ್ಪುತ್ತಿಲ್ಲ ಎಂಬ ನೆಪವೊಡ್ಡಿ ಮದುವೆಗೆ ನಿರಾಕರಿಸಿದ್ದ ಎನ್ನಲಾಗಿದೆ. ಈ ನಡುವೆ ಐಶ್ವರ್ಯಾಳ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದ ಎಂಬ ಆರೋಪವೂ ಇದೆ.
ಈ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆದು ರಾಜಿ ಸಂಧಾನವಾಗಿತ್ತು. ಬಳಿಕ ಮದುವೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಸಂತೋಷ್ ಮತ್ತೊಮ್ಮೆ ಆರು ತಿಂಗಳ ಕಾಲಾವಕಾಶ ಕೇಳಿದ್ದ. ನಂತರ ಮತ್ತೆ ಮದುವೆಯಾಗುವುದಿಲ್ಲ ಎಂದು ಹೇಳಿ ಐಶ್ವರ್ಯಾಳ ಮನೆ ಬಳಿಯೇ ಗಲಾಟೆ ಮಾಡಿಕೊಂಡು ಹೋಗಿದ್ದ ಎನ್ನಲಾಗಿದೆ.
ಇದಾದ ಬಳಿಕ ಐಶ್ವರ್ಯಾ ಸಂತೋಷ್ನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಳು. ಆದರೂ ಆತ ಪದೇಪದೇ ಭೇಟಿಯಾಗುವಂತೆ ಒತ್ತಡ ಹೇರುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.


ಇಂಟರ್ವ್ಯೂ ಇದೆ ಎಂದು ಮನೆಯಿಂದ ಹೊರಬಂದಿದ್ದ ಯುವತಿ
ಘಟನೆ ನಡೆದ ದಿನ ಐಶ್ವರ್ಯಾ ಮನೆಯಲ್ಲಿ ಇಂಟರ್ವ್ಯೂ ಇದೆ ಎಂದು ಹೇಳಿ ಹೊರಬಂದಿದ್ದಳು. ಬಳಿಕ ಸಂತೋಷ್ನನ್ನು ಭೇಟಿಯಾಗಲು ಅಬ್ಬಿಗೆರೆ ಸರ್ಕಲ್ನ ಲಾಡ್ಜ್ಗೆ ತೆರಳಿದ್ದಳು. ಮಧ್ಯಾಹ್ನ ಇಬ್ಬರೂ ರೂಮ್ಗೆ ಚೆಕ್ಇನ್ ಆಗಿದ್ದು, ರಾತ್ರಿ ವೇಳೆಗೆ ಅವರ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಐಶ್ವರ್ಯಾ ಮೂರನೇ ಮಹಡಿಯ ಕಿಟಕಿಯಿಂದ ಕೆಳಕ್ಕೆ ಬಿದ್ದಿದ್ದಳು.

ಲಾಡ್ಜ್ ಸಿಬ್ಬಂದಿ ಹೇಳಿದ್ದೇನು?
ನವೆಂಬರ್ 19ರಂದು ಮಧ್ಯಾಹ್ನ ಇಬ್ಬರೂ ಒಟ್ಟಿಗೆ ಲಾಡ್ಜ್ಗೆ ಬಂದಿದ್ದರು. ಅಬ್ಬಿಗೆರೆ ವಿಳಾಸ ಹೊಂದಿದ್ದ ಸಂತೋಷ್, ರಿಜಿಸ್ಟರ್ನಲ್ಲಿ ವಿವರ ದಾಖಲಿಸಿ ರೂಮ್ ಬುಕ್ ಮಾಡಿದ್ದ. ಲಾಡ್ಜ್ನ ಮೇಲ್ಭಾಗದಲ್ಲಿಯೂ ಕಟ್ಟಡವಿರುವುದರಿಂದ ಗಲಾಟೆಯ ಶಬ್ದ ಕೇಳಿಸಿರಲಿಕ್ಕಿಲ್ಲ. ಯುವತಿ ಯಾವ ರೀತಿಯಲ್ಲಿ ಕೆಳಕ್ಕೆ ಬಿದ್ದಳು ಎಂಬುದು ನಮಗೆ ತಿಳಿದಿಲ್ಲ. ಘಟನೆ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಪೊಲೀಸರಿಗೆ ತಿಳಿಸಿದ್ದೇವೆ ಎಂದು ಲಾಡ್ಜ್ ಸಿಬ್ಬಂದಿ ತಿಳಿಸಿದ್ದಾರೆ.


ಹತ್ಯೆ ಪ್ರಕರಣ ದಾಖಲು, ತನಿಖೆ ಚುರುಕು
ಗಲಾಟೆಯ ಸಂದರ್ಭದಲ್ಲಿ ಸಂತೋಷ್ ಯುವತಿಯನ್ನು ಬಲವಾಗಿ ತಳ್ಳಿದ್ದರಿಂದ ಆಕೆ ಕಿಟಕಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾಳೆ ಎಂಬ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹತ್ಯೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಇಬ್ಬರಿಗೂ ಮದುವೆ ನಿಶ್ಚಯವಾಗಿತ್ತು ಎಂಬ ಮಾಹಿತಿ ಲಭ್ಯವಾಗಿದ್ದು, ಆರೋಪಿಗೆ ಮದುವೆಯಾಗುವ ಇಚ್ಛೆ ಇರಲಿಲ್ಲ ಎನ್ನಲಾಗಿದೆ. ಘಟನೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಯಶವಂತಪುರ ವಿಭಾಗದ ಡಿಸಿಪಿ ನಾಗೇಶ್ ಡಿ.ಎಲ್. ತಿಳಿಸಿದ್ದಾರೆ.




