ಕ್ರೀಮ್ನಲ್ಲಿ ನಿಗದಿತ ಮಿತಿಗಿಂತ 12,500 ಪಟ್ಟು ಅಧಿಕ ಪಾದರಸ ಪತ್ತೆ; ಮಲಯಾಳಂ ಗಾಯಕ ಸಲೀಂಗೂ ಕಿಡ್ನಿ ಸಮಸ್ಯೆ!
ಕೇರಳ: ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಸೌಂದರ್ಯವರ್ಧಕ ಉತ್ಪನ್ನಗಳ ಜಾಹೀರಾತುಗಳನ್ನು ನಂಬಿ ಖರೀದಿಸುವ ಮುನ್ನ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಇನ್ಸ್ಟಾಗ್ರಾಂನಲ್ಲಿ ಇನ್ಫ್ಲುಯೆನ್ಸರ್ಗಳು ಮಾಡಿದ್ದ ಪ್ರಚಾರಕ್ಕೆ ಮರುಳಾಗಿ ಫೇರ್ನೆಸ್ ಕ್ರೀಮ್ ಬಳಸಿದ 17 ವರ್ಷದ ಬಾಲಕಿಯೊಬ್ಬಳು ಗಂಭೀರ ಮೂತ್ರಪಿಂಡ ಕಾಯಿಲೆಗೆ ತುತ್ತಾಗಿರುವ ಘಟನೆ ಕೇರಳದ ಮಲಪ್ಪುರಂನಲ್ಲಿ ಆತಂಕ ಮೂಡಿಸಿದೆ. ಇದೇ ರೀತಿಯ ಕ್ರೀಮ್ ಬಳಕೆಯಿಂದ ತಮಗೂ ಕಿಡ್ನಿ ಸಮಸ್ಯೆ ಎದುರಾಗಿತ್ತು ಎಂದು ಮಲಯಾಳಂನ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಸಲೀಂ ಕೊಡತ್ತೂರ್ ಕೂಡ ಬಹಿರಂಗಪಡಿಸಿದ್ದಾರೆ.
ಇನ್ಸ್ಟಾಗ್ರಾಂ ಜಾಹೀರಾತು ನೋಡಿ ಒಂದು ವರ್ಷ ಕ್ರೀಮ್ ಬಳಕೆ
ಮಲಪ್ಪುರಂ ಜಿಲ್ಲೆಯ 17 ವರ್ಷದ ಬಾಲಕಿಗೆ ಮೊಡವೆ, ಕಪ್ಪು ಕಲೆ ಹಾಗೂ ಪಿಗ್ಮೆಂಟೇಷನ್ ಸಮಸ್ಯೆ ಇತ್ತು. ಇವುಗಳನ್ನು ನಿವಾರಿಸುವುದರ ಜೊತೆಗೆ ಚರ್ಮವನ್ನು ಬೆಳ್ಳಗಾಗಿಸುವುದಾಗಿ ಭರವಸೆ ನೀಡಿದ್ದ ಇನ್ಸ್ಟಾಗ್ರಾಂ ವಿಡಿಯೋಗಳನ್ನು ನೋಡಿ ಆಕೆ ಆಕರ್ಷಿತಳಾಗಿದ್ದಳು. ವಿಡಿಯೋದಲ್ಲಿದ್ದ ವಾಟ್ಸ್ಆ್ಯಪ್ ಸಂಖ್ಯೆಯ ಮೂಲಕ ಮಾರಾಟಗಾರರನ್ನು ಸಂಪರ್ಕಿಸಿ ಫೇರ್ನೆಸ್ ಕ್ರೀಮ್ ಖರೀದಿಸಿದ್ದಳು.
ಆರಂಭದಲ್ಲಿ ಚರ್ಮದ ಮೇಲೆ ಉತ್ತಮ ಫಲಿತಾಂಶ ಕಂಡುಬಂದ ಹಿನ್ನೆಲೆಯಲ್ಲಿ ಸುಮಾರು ಒಂದು ವರ್ಷ ಕಾಲ ಆಕೆ ಕ್ರೀಮ್ ಬಳಸಿದ್ದಳು. ಆದರೆ, ಕ್ರಮೇಣ ಆರೋಗ್ಯದಲ್ಲಿ ಏರುಪೇರಾಗತೊಡಗಿತ್ತು. ಕಾಲುಗಳಲ್ಲಿ ತೀವ್ರ ಊತ, ರಕ್ತದೊತ್ತಡದಲ್ಲಿ ಏರುಪೇರು, ಪ್ರಜ್ಞೆ ತಪ್ಪುವುದು ಸೇರಿದಂತೆ ನಡೆಯಲು ಮತ್ತು ಮೆಟ್ಟಿಲು ಹತ್ತಲು ಕೂಡ ತೊಂದರೆಯಾಗಿತ್ತು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ವೈದ್ಯಕೀಯ ಪರೀಕ್ಷೆ ವೇಳೆ ಬಾಲಕಿಯ ದೇಹದಲ್ಲಿ ಅಪಾಯಕಾರಿ ಪ್ರಮಾಣದ ಪಾದರಸ (ಮರ್ಕ್ಯುರಿ) ಇರುವುದು ಪತ್ತೆಯಾಗಿತ್ತು. ಆಕೆಗೆ ‘ಮೆಂಬ್ರೇನಸ್ ನೆಫ್ರೋಪತಿ’ ಎಂಬ ಗಂಭೀರ ಮೂತ್ರಪಿಂಡ ಕಾಯಿಲೆ ಇರುವುದು ದೃಢಪಟ್ಟಿದೆ. ಕ್ರೀಮ್ನಲ್ಲಿದ್ದ ಪಾದರಸವು ಕಿಡ್ನಿಗಳ ಕಾರ್ಯನಿರ್ವಹಣೆಗೆ ಹಾನಿ ಮಾಡಿರುವ ಶಂಕೆ ವ್ಯಕ್ತವಾಗಿದೆ.


ನಿಗದಿತ ಮಿತಿಗಿಂತ 12,500 ಪಟ್ಟು ಅಧಿಕ ಪಾದರಸ!
ಬಾಲಕಿ ಬಳಸುತ್ತಿದ್ದ ಫೇರ್ನೆಸ್ ಕ್ರೀಮ್ನ ಮಾದರಿಯನ್ನು ಪರೀಕ್ಷಿಸಿದಾಗ ಪ್ರತಿ ಮಿಲಿಯನ್ಗೆ 12,500 ಭಾಗಗಳಷ್ಟು (12,500 PPM) ಪಾದರಸ ಇರುವುದು ಪತ್ತೆಯಾಗಿದೆ. ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಪಾದರಸದ ಅನುಮತಿಸಲಾದ ಪ್ರಮಾಣ 1 PPMಗಿಂತ ಕಡಿಮೆ ಇರಬೇಕು. ಆದರೆ, ಈ ಕ್ರೀಮ್ನಲ್ಲಿ ಪತ್ತೆಯಾದ ಪ್ರಮಾಣ ನಿಗದಿತ ಮಿತಿಗಿಂತ ಬರೋಬ್ಬರಿ 12,500 ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.
ಪಾದರಸದಂತಹ ವಿಷಕಾರಿ ಲೋಹಗಳು ದೇಹವನ್ನು ಪ್ರವೇಶಿಸಿದರೆ ಮೂತ್ರಪಿಂಡಗಳ ಕಾರ್ಯನಿರ್ವಹಣೆಗೆ ಗಂಭೀರ ಹಾನಿಯಾಗಬಹುದು. ಕಿಡ್ನಿಗಳ ರಕ್ತ ಶೋಧನಾ ವ್ಯವಸ್ಥೆಗೆ ಹಾನಿಯಾದಾಗ ದೇಹದಲ್ಲಿ ಪ್ರೋಟೀನ್ ನಷ್ಟ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.


‘ನನಗೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು’: ಗಾಯಕ ಸಲೀಂ
ಬಾಲಕಿಯ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮಲಯಾಳಂ ಗಾಯಕ ಹಾಗೂ ಸಂಗೀತ ನಿರ್ದೇಶಕ ಸಲೀಂ ಕೊಡತ್ತೂರ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ತಾವು ಕೂಡ ಹಿಂದೆ ಫೇರ್ನೆಸ್ ಕ್ರೀಮ್ ಬಳಸಿದ್ದಾಗಿ ತಿಳಿಸಿದ್ದಾರೆ.
ಕ್ರೀಮ್ ಬಳಸಿದ ಕೆಲವೇ ತಿಂಗಳುಗಳಲ್ಲಿ ಮೂತ್ರನಾಳದ ಸೋಂಕು, ಕಣ್ಣುರೆಪ್ಪೆಗಳು ಹಾಗೂ ಕಾಲುಗಳಲ್ಲಿ ಊತ ಮತ್ತು ರೋಗನಿರೋಧಕ ಶಕ್ತಿ ಕುಸಿತದಂತಹ ಸಮಸ್ಯೆಗಳು ಕಾಣಿಸಿಕೊಂಡಿದ್ದವು ಎಂದು ಹೇಳಿದ್ದಾರೆ. ದೇಹದಲ್ಲಿನ ಆಲ್ಬುಮಿನ್ ಎಂಬ ಪ್ರೋಟೀನ್ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದರು. ಇದೇ ಸ್ಥಿತಿ ಮುಂದುವರಿದರೆ ಕಿಡ್ನಿಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವ ಅಪಾಯವಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು ಎನ್ನಲಾಗಿದೆ.
ನಂತರ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಾಗ ಬಯಾಪ್ಸಿ ವರದಿಯಲ್ಲಿ ತಮಗೂ ಮೆಂಬ್ರೇನಸ್ ನೆಫ್ರೋಪತಿ ಇರುವುದು ದೃಢಪಟ್ಟಿತ್ತು. ಬಳಿಕ ಹಲವು ತಿಂಗಳುಗಳ ಕಾಲ ಚಿಕಿತ್ಸೆ ಪಡೆದಿದ್ದಾಗಿ ಸಲೀಂ ತಿಳಿಸಿದ್ದಾರೆ.


ಪಾಕಿಸ್ತಾನದಿಂದ ಅಕ್ರಮವಾಗಿ ಬರುತ್ತಿವೆಯೇ ಕ್ರೀಮ್ಗಳು?
ಈ ಘಟನೆಗಳ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಸೌಂದರ್ಯವರ್ಧಕ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಮುಂದಾಗಿದೆ. ರಾಜ್ಯಾದ್ಯಂತ ಫೇಸ್ ಕ್ರೀಮ್ಗಳು ಹಾಗೂ ಪ್ರೋಟೀನ್ ಪುಡಿಗಳ ಗುಣಮಟ್ಟ ಪರೀಕ್ಷೆ ನಡೆಸುವುದಾಗಿ ಆರೋಗ್ಯ ಸಚಿವರು ತಿಳಿಸಿದ್ದಾರೆ ಎನ್ನಲಾಗಿದೆ.
ಈ ಉತ್ಪನ್ನಗಳು ಪಾಕಿಸ್ತಾನದಿಂದ ಬರುತ್ತಿವೆ ಎಂಬ ಮಾಹಿತಿಯನ್ನೂ ಸಚಿವರು ಪ್ರಸ್ತಾಪಿಸಿದ್ದು, ಮಂಗಳೂರು-ಕಾಸರಗೋಡು ಭಾಗಗಳಲ್ಲಿಯೂ ಇವುಗಳ ಬಳಕೆ ಕಂಡುಬಂದಿದೆ ಎಂದು ಹೇಳಿದ್ದಾರೆ. ಉತ್ಪನ್ನಗಳ ಮೂಲ, ಅವುಗಳಲ್ಲಿರುವ ರಾಸಾಯನಿಕ ಅಂಶಗಳು ಹಾಗೂ ಮಾರಾಟ ಜಾಲದ ಕುರಿತು ಪರಿಶೀಲನೆ ನಡೆಯಬೇಕಿದೆ.
ಇತ್ತ, ಕ್ರೀಮ್ ಬಳಕೆಯ ಬಳಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿರುವ ಬಗ್ಗೆ ಸಂಬಂಧಪಟ್ಟ ಸಂಸ್ಥೆಗೆ ದೂರು ನೀಡಿದ್ದರೂ ಸೂಕ್ತ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಬಾಲಕಿಯ ಕುಟುಂಬ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲು ಕುಟುಂಬ ನಿರ್ಧರಿಸಿದೆ ಎನ್ನಲಾಗಿದೆ.

ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ
ಚರ್ಮವನ್ನು ಬೆಳ್ಳಗಾಗಿಸುವುದಾಗಿ ಅಥವಾ ಕೆಲವೇ ದಿನಗಳಲ್ಲಿ ಮೊಡವೆ, ಕಪ್ಪು ಕಲೆಗಳನ್ನು ಸಂಪೂರ್ಣವಾಗಿ ನಿವಾರಿಸುವುದಾಗಿ ಭರವಸೆ ನೀಡುವ ಸಾಮಾಜಿಕ ಜಾಲತಾಣಗಳ ಜಾಹೀರಾತುಗಳನ್ನು ಕುರುಡಾಗಿ ನಂಬಬಾರದು. ಸೆಲೆಬ್ರಿಟಿಗಳು ಅಥವಾ ಇನ್ಫ್ಲುಯೆನ್ಸರ್ಗಳು ಪ್ರಚಾರ ಮಾಡುತ್ತಾರೆ ಎಂಬ ಕಾರಣಕ್ಕೆ ಯಾವುದೇ ಉತ್ಪನ್ನ ಸುರಕ್ಷಿತ ಎಂದು ಭಾವಿಸುವುದು ಅಪಾಯಕಾರಿ.
ಸೌಂದರ್ಯವರ್ಧಕ ಉತ್ಪನ್ನಗಳನ್ನು ಖರೀದಿಸುವ ಮುನ್ನ ಅದರ ತಯಾರಕರ ವಿವರ, ಪದಾರ್ಥಗಳ ಪಟ್ಟಿ, ಪರವಾನಗಿ ಹಾಗೂ ಮುಕ್ತಾಯ ದಿನಾಂಕವನ್ನು ಪರಿಶೀಲಿಸುವುದು ಅಗತ್ಯ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವ ಬದಲು ಚರ್ಮರೋಗ ತಜ್ಞರನ್ನು ಸಂಪರ್ಕಿಸಬೇಕು.
ಸೌಂದರ್ಯದ ಹೆಸರಿನಲ್ಲಿ ಆರೋಗ್ಯವನ್ನು ಅಪಾಯಕ್ಕೆ ಒಡ್ಡಿಕೊಳ್ಳಬಾರದು ಎಂಬುದನ್ನು ಕೇರಳದ ಈ ಘಟನೆ ಮತ್ತೊಮ್ಮೆ ಎಚ್ಚರಿಸಿದೆ.




